ರೈತನ ಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Nov 22, 2025, 02:30 AM IST
ಆರೋಪಿ  | Kannada Prabha

ಸಾರಾಂಶ

ರೈತನ ಕಾಲನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿ ಹತ್ಯೆ ಮಾಡಿದ ಮೂವರು ಆರೋಪಿಗಳಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ರೈತನ ಕಾಲನ್ನು ಕಡಿದು ಗಂಭೀರವಾಗಿ ಗಾಯಗೊಳಿಸಿ ಹತ್ಯೆ ಮಾಡಿದ ಮೂವರು ಆರೋಪಿಗಳಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಹಳಿಯಾಳದ ಕರ್ಲಕಟ್ಟಾ ಗ್ರಾಮದ ಸಹದೇವ ಹನುಮಂತ ದಡ್ಡಿಕರ, ಸದಾನಂದ ಅನಂತ ಪಾಟೀಲ ಹಾಗೂ ರಾಮಾ ಮಾರುತಿ ಹುಬ್ಬಳಿಕರ ಶಿಕ್ಷೆಗೊಳಗಾದವರು. ಇವರಿಗೆ ತಲಾ ₹20 ಸಾವಿರದಂತೆ ದಂಡ ವಿಧಿಸಿದ್ದು, ಮೂವರು ಸೇರಿ ಒಟ್ಟು 75 ಸಾವಿರ ಮೃತನ ಪತ್ನಿಗೆ ಪರಿಹಾರವಾಗಿ ನೀಡುವಂತೆಯೂ ಆದೇಶಿಸಿದೆ.

ಕರ್ಲಕಟ್ಟಾದಲ್ಲಿ ಮಾಯಾ ಸುಂಟಗಾರ ಹೆಸರಿನಲ್ಲಿರುವ 3 ಎಕರೆ ಭೂಮಿಯನ್ನು ಮಾಯಾಶ್ರೀ ತೋರಸ್ಕರ್ ಕುಟುಂಬದವರು ಖರೀದಿಸಿದ್ದರು. ಆದರೆ ಜಮೀನಿನಲ್ಲಿ ದುಡಿಯುತ್ತಿದ್ದ ಸಹದೇವ ದಡ್ಡಿಕರ ಜಮೀನು ಬಿಟ್ಟುಕೊಡಲಿಲ್ಲ. ಇದರಿಂದ ಇಬ್ಬರ ನಡುವೆಯೂ ವಾದ ವಿವಾದ ನಡೆಯುತ್ತಿತ್ತು. 2023 ಮೇ 11ರಂದು ಜಮೀನು ಮಾಲೀಕರಾದ ಮಾಯಾಶ್ರೀ ಪತಿ ಪರಶುರಾಮ ಹಾಗೂ ಸಹದೇವ ದಡ್ಡಿಕರ ನಡುವೆ ಕಲಹ ನಡೆದಿತ್ತು. ಅಂದೇ ಪರಶುರಾಮ ಅವರನ್ನು ಕಡಿದು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ ವಾದ ಮಂಡಿಸಿದ್ದರು.

14 ಅಡಿ ಉದ್ದದ ಕಾಳಿಂಗ ಸರ್ಪ ಸಂರಕ್ಷಣೆ:

ತೋಟದಿಂದ ಹೊರಹೋಗಲು ಮಾರ್ಗ ಕಾಣದೇ ೨ ದಿನದಿಂದ ಅಲ್ಲಿಯೇ ಓಡಾಡಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ೧೪ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಕುಮಟಾದ ಉರಗ ತಜ್ಞ ಪವನ ನಾಯ್ಕ ಸಂರಕ್ಷಿಸುವ ಮೂಲಕ ಜನರಲ್ಲಿ ಮೂಡಿದ್ದ ಭೀತಿ ದೂರ ಮಾಡಿದ್ದಾರೆ.ಶಿರಸಿ ತಾಲೂಕಿನ ರಾಗಿಹೊಸಳ್ಳಿಯ ಪ್ರಶಾಂತ ಹೆಗಡೆಯವರ ತೋಟದಲ್ಲಿ ಕಳೆದ ೨ ದಿನದಿಂದ ಓಡಾಡುತ್ತಿತ್ತು. ಹೀಗಾಗಿ ಅಪಾಯದ ಮುನ್ನೆಚ್ಚರಿಕೆಯಾಗಿ ಕುಮಟಾದಿಂದ ಉರಗ ತಜ್ಞರಾದ ಪವನ ನಾಯ್ಕ ಅವರನ್ನು ಕರೆಯಿಸಲಾಗಿತ್ತು. ಕೆಲ ಸಮಯದ ಕಾರ್ಯಾಚರಣೆಯ ಬಳಿಕ ಕಾಳಿಂಗವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. ಕಾಳಿಂಗ ಸರ್ಪಗಳು ಸಾಧು ಹಾಗೂ ನಾಚಿಕೆ ಸ್ವಭಾವದ ಜೀವಿಯಾಗಿದೆ. ತನಗೆ ಅತಿಯಾದ ತೊಂದರೆಯಾದಲ್ಲಿ ಮಾತ್ರ ಕಚ್ಚುವ ಸಾಧ್ಯತೆ ಇದ್ದು, ಕಳೆದ ೪-೫ ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾರಿಗೂ ಕಚ್ಚಿದ ಉದಾಹರಣೆಗಳಿಲ್ಲ ಎಂದು ಸ್ಥಳೀಯರಿಗೆ ಪವನ ನಾಯ್ಕ ತಿಳಿಸಿದ್ದಾರೆ.

PREV

Recommended Stories

ಎಂಜಿನಿಯರ್‌ಗೆ ಟವರ್‌ ಹತ್ತು ಅಂದಿದ್ದ ಕಂಪನಿಗೆ ‘ಹೈ’ ತಪರಾಕಿ
ಸಚಿವ ಸ್ಥಾನಕ್ಕಾಗಿ ಮತ್ತಷ್ಟು ಶಾಸಕರಿಂದ ಹೆಚ್ಚಿದ ಬೇಡಿಕೆ