ಹಾವೇರಿ: ಇಂದು ಮಾಧ್ಯಮವಿಲ್ಲದೇ ಬದುಕು ಅಸಾಧ್ಯವೆನಿಸಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಹೇಳಿದರು.
ಉತ್ತಮ ಮಾತುಗಾರಿಕೆ, ಸೃಜನಶೀಲತೆ ಮತ್ತು ಕ್ರಿಯಾಶೀಲತೆಯಿಂದ ಜಾಹೀರಾತು ಪ್ರಪಂಚದಲ್ಲಿ ಮಿಂಚಬಹುದು. ವಿಶ್ವದಾದ್ಯಂತ 2000 ಟ್ರಿಲಿಯನ್ ಡಾಲರ್ ಮೌಲ್ಯದ ಜಾಹೀರಾತು ಉತ್ಪಾದನೆ ಆಗುತ್ತಿದೆ. ಶ್ರದ್ಧೆ, ಪರಿಶ್ರಮದ ಕೆಲಸದಿಂದ ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಧ್ಯವಾಗಲಿದೆ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಸಮರ್ಥರಿಗೆ ಕಾದಿವೆ. ಸಾಮರ್ಥ್ಯ ಗಳಿಸಿ ಕೆಲಸ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು.
ದೇಶದಲ್ಲಿ ಕೊರೋನಾ ನಂತರದ ಅವಧಿಯಲ್ಲಿ ಮುದ್ರಣ ಮಾಧ್ಯಮದ ಭವಿಷ್ಯತ್ತಿನ ಬಗ್ಗೆ ಆತಂಕವಿತ್ತು. ಅದು ವಾಸ್ತವವೂ ಆಗಿದ್ದು, ಅದನ್ನು ಮೀರಿ ಬೆಳೆದಿದೆ. ಮುಂದಿನ 30 ವರ್ಷಗಳ ವರೆಗೆ ಮುದ್ರಣ ಮಾಧ್ಯಮ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದೇ ರೀತಿ ಇಂಗ್ಲಿಷ್ ವೃತ್ತ ಪತ್ರಿಕೆಗಳಿಗಿಂತ ಇಂದು ಪ್ರಾದೇಶಿಕ ಪತ್ರಿಕೆಗಳು ತಮ್ಮ ಪಾರಮ್ಯ ಸಾಧಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎನ್ನಬಹುದು ಎಂದು ಹೇಳಿದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಕಳೆದ ಸಾಲಿನಲ್ಲಿ ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ವಿಭಾಗಕ್ಕೆ ಪ್ರವೇಶ ನೀಡಿರಲಿಲ್ಲ. ಈ ಬಾರಿ ನಾವಿನ್ಯತೆಯ ಪಠ್ಯಕ್ರಮಗಳು, ಪೂರಕ ಸಂಪನ್ಮೂಲಗಳೊಂದಿಗೆ ಭವಿಷ್ಯತ್ತಿನ ಡಿಜಿಟಲ್ ಮಾಧ್ಯಮಕ್ಕೆ ಪೂರಕ ಸಮೂಹ ಸಂವಹನ ವಿಭಾಗ ತೆರೆಯಲು ಬದ್ಧ. ಈ ಕುರಿತು ಅಗತ್ಯ ಮಾಹಿತಿ ಮತ್ತು ಸಂಪನ್ಮೂಲ ಕ್ರೋಡೀಕರಣ ಮಾಡಲಿದ್ದೇವೆ ಎಂದರು.
ಹಾವೇರಿ ವಿವಿ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟಿ, ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ, ಜಿ.ಎಚ್. ಕಾಲೇಜು ಪ್ರಾಚಾರ್ಯ ಎಂ.ಎಂ. ಹೊಳ್ಳಿಯವರ, ಐಕ್ಯೂಎಸಿ ಸಂಯೋಜಕಿ ರೂಪಾ ಕೋರೆ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ. ರವೀಂದ್ರಕುಮಾರ ಬಣಕಾರ ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಗೀತಾ ಬೆಳಗಾವಿ ಸ್ವಾಗತಿಸಿದರು.