ಕುಮಟಾ: ಭಗವದ್ಗೀತೆಯ ಪಠಣ ಹಾಗೂ ಮನನದಿಂದ ನಮ್ಮ ಜೀವನದ ನಕಾರಾತ್ಮಕ ಸಂಗತಿಗಳು ಧನಾತ್ಮಕವಾಗುವಂತೆ ಪರಿಣಾಮಕಾರಿ ಪರಿವರ್ತನೆ ಮಾಡಿಕೊಳ್ಳಲು ಸಾಧ್ಯ ಇದೆ ಎಂದು ಇಲ್ಲಿನ ಸರ್ಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಟಿ. ನಾಯ್ಕ ತಿಳಿಸಿದರು.
ದೀವಗಿಯ ಡಿಜೆವಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಚೇತನಾ ಸೇವಾ ಸಂಸ್ಥೆ ಹಾಗೂ ಶ್ರೀಮದ್ಭಗವದ್ಗೀತಾ ಅಧ್ಯಯನ ಕೇಂದ್ರದಿಂದ ಸನಿಹದ ಹಾಲಕ್ಕಿ ಸಭಾಭವನದಲ್ಲಿ ಆಯೋಜಿಸಿದ್ದ ಗೀತಾ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶೇಷ ಉಪನ್ಯಾಸ ಮಾಡಿದ, ಗೀತಾ ಅಧ್ಯಯನ ಕೇಂದ್ರದ ಸಂಚಾಲಕಿ ಎ.ಆರ್. ಭಾರತಿ, ಭಗವದ್ಗೀತೆಯು ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಭಗವದ್ಗೀತೆ ಕೇವಲ ಪೂಜಿಸುವ ವಸ್ತುವಲ್ಲ, ಅರ್ಥ ಮಾಡಿಕೊಂಡು ಜೀವನದಲ್ಲಿ ಧಾರಣೆ ಮಾಡಿದಾಗ ಮಾತ್ರ ಅದರಲ್ಲಿಯ ಶಕ್ತಿ ನಮಗೆ ಪ್ರಾಪ್ತಿಯಾಗುತ್ತದೆ. ಗೀತೆಯ ಮೂಲಕ ಭಾರತವನ್ನು ಧರ್ಮಕ್ಷೇತ್ರವನ್ನಾಗಿ ಬೆಳಗೋಣ ಎಂದರು.ಅಧ್ಯಕ್ಷತೆ ವಹಿಸಿದ್ದ ಡಿಜೆವಿಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಭಾಸ್ಕರ ಭಟ್, ರೈಲ್ವೆ ಅಧಿಕಾರಿ ಪ್ರಭಾಕರ ಹೆಗಡೆಕರ್, ಸಂರಕ್ಷಣಾ ಯೋಧ ಪ್ರಶಸ್ತಿ ಪುರಸ್ಕೃತ ರವಿ ಅಂಬಿಗ ಧಾರೇಶ್ವರ ಮಾತನಾಡಿದರು. ದೇವಸ್ತುತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಪಾಂಡುರಂಗ ದೇಶಭಂಡಾರಿ ಸ್ವಾಗತಿಸಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ ನಿರ್ವಹಿಸಿದರು. ಶಿಕ್ಷಕ ಸುಭಾಸ ಎನ್. ಅಂಬಿಗ ವಂದಿಸಿದರು.11ರಂದು ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಾರವಾರ: ಲೋಕಾಯುಕ್ತ ಅಧಿಕಾರಿಗಳ ತಾಲೂಕು ಭೇಟಿ ಕಾರ್ಯಕ್ರಮವು ಡಿ. 11ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಲೋಕಾಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರುಗಳನ್ನು ಸ್ವೀಕಾರ ಮಾಡಿ, ವಿಚಾರಣೆ ನಡೆಸುವರು. ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ ಮತ್ತು ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕರ್ತವ್ಯಲೋಪ, ಕಳಪೆ ಕಾಮಗಾರಿ ಮಾಡುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ನಮೂನೆ- 1 ಮತ್ತು 2ರಲ್ಲಿ ಭರ್ತಿ ಮಾಡಿ ನೀಡಬಹುದು. ಸಾರ್ವಜನಿಕರು ತಮ್ಮ ದೂರುಗಳು ಇದ್ದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಬಹುದು.