ಹಾವೇರಿ: ಭಾಷೆ ಎಂದರೆ ಒಂದು ಲಯ ಎಂದರ್ಥ. ಬದುಕನ್ನ ಎಚ್ಚರಿಸುವ ಓದು ಇಂದಿನ ಅವಶ್ಯಕತೆಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಉಡುಪಿಯ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಯಪ್ರಕಾಶ್ ಶೆಟ್ಟಿ ಹೇಳಿದರು.
ನಗರದ ಜಿ.ಎಚ್. ಕಾಲೇಜ್‌ನ ಕನ್ನಡ ವಿಭಾಗ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ "ಹಳಗನ್ನಡ ಕಾವ್ಯದೋದು ಕಮ್ಮಟ "ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.ಹಳಗನ್ನಡ ಕಾವ್ಯದೋದು ಅದೊಂದು ರಸವತ್ತಾದ ಓದು, ಹಳಗನ್ನಡ ಹೊಸಗನ್ನಡವೆಂಬುವುದಿಲ್ಲ. ನಾವು ಅದನ್ನು ಹಳೆಯದನ್ನಾಗಿ ಮಾಡಿದ್ದೇವೆ. ಕಾವ್ಯ ಅಂದಂದಿನ ಬದುಕನ್ನು ಅರ್ಥೈಸುವ ಪರಿಯಾಗಿದ್ದು, ವಾಸ್ತವ ಜೊತೆಯಲ್ಲಿ ಸಮೀಕರಿಸುವುದೇ ನಿಜವಾದ ಕಾವ್ಯ ಎಂದು ಅಭಿಪ್ರಾಯ ಪಟ್ಟರು.
ಪ್ರಸ್ತುತ ಕಮ್ಮಟದಲ್ಲಿ ಹಳಗನ್ನಡ ಕಾವ್ಯ ಕೃತಿಗಳ ಆಂತರ್ಯದ ಅನಾವರಣ ವ್ಯಕ್ತಪಡಿಸುತ್ತ ಚಂಪೂ, ಷಟ್ಪದಿ, ಸಾಂಗತ್ಯ ಮೊದಲಾದ ಕಾವ್ಯ ಕೃತಿಗಳ ಅರ್ಥೈಸಿಕೊಳ್ಳುವಿಕೆಯ ಜೊತೆಗೆ ಛಂದಸ್ಸಿನ ವಿವಿಧ ಪ್ರಕಾರಗಳನ್ನು ಬಿಡಿಸಿ ಓದುವ ಕ್ರಮಗಳನ್ನು ಹಾಗೂ ಸಂದರ್ಭೋಚಿತ ಅರ್ಥೈಸಿಕೊಳ್ಳುವಿಕೆಯ ವ್ಯವಸ್ಥಿತ ಅಧ್ಯಯನದ ವಿಧಾನಗಳನ್ನು ವಿವರಿಸಿದರು.ಜಿಲ್ಲೆಯ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಕಮ್ಮಟ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿ ಸಮುದಾಯ ಹಳಗನ್ನಡವನ್ನು ಕಬ್ಬಿಣದ ಕಡಲೆ ಎನ್ನುವ ಹೊತ್ತಿಗೆ ಇಂತಹ ಕಮ್ಮಟಗಳು ಪ್ರಾಚೀನ ಕಾವ್ಯಗಳ ಕುರಿತಾಗಿ ಯುವ ಸಮುದಾಯಕ್ಕೆ ಹೆಚ್ಚು ಆಸಕ್ತಿಯನ್ನು ಮೂಡಿಸುವಂತಾಗುತ್ತದೆ ಎಂದರು.
ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರ, ಪದವಿ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ, ಐಕ್ಯೂಎಸಿ ಸಂಯೋಜಕಿ ಡಾ. ರೂಪ ಕೋರೆ, ಸಂಘಟನಾ ಕಾರ್ಯದರ್ಶಿ ಶಮಂತ್ ಕುಮಾರ್ ಕೆ.ಎಸ್., ಇತರರಿದ್ದರು.ರಾಜ್ಯದ ವಿವಿಧ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳಿಂದ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಭಾಗವಹಿಸಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಎಫ್. ಹೊಸಮನಿ ಪ್ರಾಸ್ತಾವಿಕ ಮಾತನಾಡಿದರು. ಸೋಮಣ್ಣ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಮನು ಅತಿಥಿಗಳನ್ನು ಸ್ವಾಗತಿಸಿದರು. ಮಣಿಕಂಠ ನಿರೂಪಿಸಿದರು. ಮಾರುತಿ ಡಂಬರಮತ್ತೂರು ವಂದಿಸಿದರು.