ಜ್ಞಾನ, ವಿವೇಕದ ಸಂಕೇತವೇ ಬೆಳಕು: ರಮೇಶ ಉಪಾಧ್ಯಾಯ

KannadaprabhaNewsNetwork |  
Published : Nov 09, 2026, 02:15 AM IST
ಕಾರ್ಯಕ್ರಮವನ್ನು ವಿದ್ವಾನ್ ಎಂ. ರಮೇಶ ಉಪಾಧ್ಯಾಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಅರಿವು, ಜ್ಞಾನ, ವಿವೇಕ ಹಾಗೂ ಸದ್ಗುಣಗಳ ಸಂಕೇತವೇ ಬೆಳಕು. ಅಂತರಂಗದಲ್ಲಿರುವ ಅಜ್ಞಾನ, ಅಹಂಕಾರ, ದ್ವೇಷ ಮತ್ತು ದುಷ್ಟ ಆಲೋಚನೆಗಳೆಂಬ ಕತ್ತಲೆಯನ್ನು ದೂರ ಮಾಡಿ, ಜ್ಞಾನ, ಪ್ರೀತಿ, ಭಕ್ತಿ ಹಾಗೂ ಕರುಣೆಯ ಬೆಳಕನ್ನು ಸ್ಥಾಪಿಸಿಕೊಳ್ಳುವ ಪವಿತ್ರ ಪರ್ವ.

ಕುಮಟಾ: ಮನುಷ್ಯನಲ್ಲಿರುವ ಜ್ಞಾನವನ್ನು ಜಾಗೃತಗೊಳಿಸಲು ಭಕ್ತಿ, ಪ್ರೀತಿ, ಕರುಣೆ ಹಾಗೂ ವಿವೇಕಗಳೆಂಬ ಸದ್ಗುಣಗಳು ಅಗತ್ಯ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಜ್ಞಾನೋದಯ ಸಾಧ್ಯ. ದೀಪಾವಳಿಯ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಜೀವನಕ್ಕೆ ಪೂರಕವಾದ ಮೌಲ್ಯಗಳಿವೆ ಎಂದು ವಿದ್ವಾನ್ ಎಂ. ರಮೇಶ ಉಪಾಧ್ಯಾಯ ಹೇಳಿದರು.

ಕೊಂಕಣ ಎಜುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಗಳು ಹಾಗೂ ಮಾತೃಮಂಡಳಿಯ ಸಹಯೋಗದಲ್ಲಿ ಸರಸ್ವತಿ ವಿದ್ಯಾ ಕೇಂದ್ರದಲ್ಲಿ ಆಯೋಜಿಸಿದ್ದ ದೀಪಾವಳಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಅರಿವು, ಜ್ಞಾನ, ವಿವೇಕ ಹಾಗೂ ಸದ್ಗುಣಗಳ ಸಂಕೇತವೇ ಬೆಳಕು. ಅಂತರಂಗದಲ್ಲಿರುವ ಅಜ್ಞಾನ, ಅಹಂಕಾರ, ದ್ವೇಷ ಮತ್ತು ದುಷ್ಟ ಆಲೋಚನೆಗಳೆಂಬ ಕತ್ತಲೆಯನ್ನು ದೂರ ಮಾಡಿ, ಜ್ಞಾನ, ಪ್ರೀತಿ, ಭಕ್ತಿ ಹಾಗೂ ಕರುಣೆಯ ಬೆಳಕನ್ನು ಸ್ಥಾಪಿಸಿಕೊಳ್ಳುವ ಪವಿತ್ರ ಪರ್ವ ಎಂದರು.

ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ತನ್ನನ್ನೇ ತಾನು ಉರಿಸಿಕೊಂಡು ಜಗತ್ತಿಗೆ ಬೆಳಕು ನೀಡುವ ಶಕ್ತಿ ಹಣತೆಗಿರುವಂತೆ, ತನ್ನ ಬದುಕನ್ನೇ ಕುಟುಂಬದ ಒಳಿತಿಗಾಗಿ ಮುಡಿಪಾಗಿಟ್ಟು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಶಕ್ತಿ ತಂದೆ- ತಾಯಿಗಿದೆ. ಹೀಗಾಗಿ ತಂದೆ- ತಾಯಿಯರೇ ಪ್ರತಿಯೊಬ್ಬರ ಬದುಕಿನ ನಿಜವಾದ ದೀಪವಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಉಪಾಧ್ಯಕ್ಷ ರಮೇಶ ಪ್ರಭು ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕದ ಜ್ಞಾನದ ಜತೆಗೆ ನಮ್ಮ ನೆಲದ ಸಂಸ್ಕೃತಿ, ಪರಂಪರೆ, ಆಚಾರ- ವಿಚಾರ ಹಾಗೂ ಜೀವನಮೌಲ್ಯಗಳ ಪರಿಚಯವೂ ಮಕ್ಕಳಿಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿಯ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿದೆ ಎಂದರು.

ಪೂರ್ವ ವಿದ್ಯಾರ್ಥಿನಿ ಹೆಸರಾಂತ ವೈದ್ಯೆ ಡಾ. ಪ್ರಿಯಾ ಬಾಡ್ಕರ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವಿಶ್ವಸ್ಥರಾದ ಅಶೋಕ ಪ್ರಭು, ಅನಂತ ಶಾನಭಾಗ, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಪ್ರಾಚಾರ್ಯ ಜಿ.ಎಸ್. ಹೆಗಡೆ ಕಣ್ಣಿ, ಮುಖ್ಯ ಶಿಕ್ಷಕರಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ವಿನಾಯಕ ಹೆಗಡೆಕರ, ಮಾತೃಮಂಡಳಿಯ ಅಧ್ಯಕ್ಷರಾದ ಪೂಜಾ ಕಾಮತ್, ಲತಾ ಶೇಟ್, ನಯನಾ ಹೆಗಡೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಲ್ಲವಿ ಪ್ರಭು ವೇದಿಕೆಯಲ್ಲಿದ್ದರು.

ಬಾಲಮಂದಿರದ ಚಿಣ್ಣರು ವಿವಿಧ ದೇವತೆಗಳ ಆಕರ್ಷಕ ವೇಷಭೂಷಣದೊಂದಿಗೆ ಪ್ರದರ್ಶನ ನೀಡಿದರು. ಮಾತೃಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ವಿಶ್ವಸ್ಥ ರಾಮಕೃಷ್ಣ ಗೋಳಿ, ಡಿ.ಡಿ. ಕಾಮತ್, ಮುಖ್ಯಶಿಕ್ಷಕ ಗಣೇಶ ಜೋಶಿ, ಗೌರೀಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ