ತುಂತುರು ಮಳೆ: ಇಂದು, ನಾಳೆ ಆರೆಂಜ್‌ ಆಲರ್ಟ್‌

KannadaprabhaNewsNetwork | Published : Aug 4, 2024 1:18 AM

ಸಾರಾಂಶ

ಶುಕ್ರವಾರದ ಮಳೆಗೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ರತ್ನಾಕರ ಪೂಜಾರಿ ಎಂಬವರ ವಾಸ್ತವ್ಯದ ಮನೆಗೆ ಸಾಕಷ್ಟು ಹಾನಿಯಾಗಿದ್ದು, 1 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ

ಕರಾವಳಿಯಲ್ಲಿ ಶನಿವಾರ ಇಡೀ ದಿನ ತುಂತುರು ಮಳೆಯ ವಾತಾವರಣ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ ಆಗಸ್ಟ್‌ 4 ಮತ್ತು 5ರಂದು ಆರೆಂಜ್‌ ಅಲರ್ಟ್‌ ಘೋಷಿಸಿದೆ.

ದ.ಕ.ಜಿಲ್ಲೆಯಲ್ಲಿ ಮಂಗಳೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನಪೂರ್ತಿ ಆಗಾಗ ತುಂತುರು ಮಳೆ ಹನಿದಿದೆ. ಕೆಲವು ಕಡೆ ಸ್ವಲ್ಪ ಹೊತ್ತು ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ಮೋಡ ಹಾಗೂ ತಂಗಾಳಿಯಿಂದ ವಾತಾವರಣ ಚಳಿ ಹಿಡಿಸಿದೆ. ಸಂಜೆ ವೇಳೆಗೆ ಹಗುರ ಮಳೆ ಕಾಣಿಸಿದೆ.

ಉಡುಪಿ ಜಿಲ್ಲೆಯಲ್ಲಿ ಶನಿವಾರ ಮಳೆ ಸ್ವಲ್ಪ ಹಿಮ್ಮುಖವಾಗಿತ್ತು, ಶುಕ್ರವಾರ ರಾತ್ರಿಯೂ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಹಗಲಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದರೂ, ಹವಾಮಾನ ಮುನ್ನೆಚ್ಚರಿಕೆಯಂತೆ ಭಾರಿ ಮಳೆಯಾಗಿಲ್ಲ.ಶುಕ್ರವಾರದ ಮಳೆಗೆ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ರತ್ನಾಕರ ಪೂಜಾರಿ ಎಂಬವರ ವಾಸ್ತವ್ಯದ ಮನೆಗೆ ಸಾಕಷ್ಟು ಹಾನಿಯಾಗಿದ್ದು, 1 ಲಕ್ಷ ರು.ಗೂ ಅಧಿಕ ನಷ್ಟವಾಗಿದೆ.ಕಾಪು ತಾಲೂಕಿನ ಮೂಳೂರು ಗ್ರಾಮದ ಶೇಖರ್ ಮುಖಾರಿ ಅವರ ಮನೆಗೆ 60,000 ರು., ಕುಂದಾಪುರ ತಾಲೂಕಿನ ಕುಂದಾಪುರ ಗ್ರಾಮದ ಪಾರ್ವತಿ ಬಸವ ಅವರ ಮನೆಗೆ 80,000 ರು., ಚಿತ್ತೂರು ಸಾದಮ್ಮ ಶೆಟ್ಟಿ ಅವರ ಮನೆಗೆ 20,000 ರು., ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಜಯಂತಿ ನಾಯಕ್ ಅವರ ಮನೆಗೆ 50,000, ಪುತ್ತೂರು ಗ್ರಾಮದ ಪ್ರೇಮ ಬಾಬು ಅವರ ಮನೆಗೆ 25,000 ರು., ಶಿವಳ್ಳಿ ಗ್ರಾಮ ಕುಸುಮ ನಾರಾಯಣ ಅವರ ಮನೆಗೆ 15,000 ರು. ಹಾನಿಯಾಗಿದೆ.ಶನಿವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ 79.30 ಮಿ.ಮೀ. ಮಳೆಯಾಗಿದೆ.

ತಡೆಗೋಡೆ ಕಾಮಗಾರಿ:

ಹಾಸನ-ಮಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ಮಧ್ಯೆ ಉಂಟಾದ ಪ್ರಾಕೃತಿಕ ತೊಂದರೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಅಹೋರಾತ್ರಿ ಕಾಮಗಾರಿ ನಡೆಯುತ್ತಿದ್ದು, ಶನಿವಾರ ವೇಳೆಗೆ ಭಾರಿ ಕುಸಿತ ಕಂಡ ಹಳಿ ಪಕ್ಕದ ತಡೆಗೋಡೆಗೆ ರಕ್ಷಣಾತ್ಮಕ ಕ್ರಮ ಪೂರ್ತಿಗೊಳಿಸಲಾಗಿದೆ. ಮರಳು ಚೀಲ, ದೊಡ್ಡ ಗಾತ್ರದ ಕಲ್ಲು, ಜಲ್ಲಿಕಲ್ಲುಗಳಿಂದ ಗಟ್ಟಿಗೊಳಿಸುವ ಕೆಲಸ ಅಂತಿಮ ಹಂತದಲ್ಲಿದೆ. ಇಲ್ಲಿ ಭಾರಿ ಮಳೆಗೆ ಮಣ್ಣು ಕುಸಿತು ಪ್ರಪಾತ ಉಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನಲ್ಲಿ ಹೆದ್ದಾರಿಗೆ ಬಿದ್ದ ಬೃಹತ್‌ ಮಣ್ಣಿನ ರಾಶಿಯ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಭಾರಿ ಮಳೆಗೆ ಮತ್ತೆ ಮತ್ತೆ ಗುಡ್ಡ ಕುಸಿಯುತ್ತಿದ್ದು, ವಾಹನ ಸಂಚಾರ ಬಂದ್‌ ಮುಂದುವರಿದಿದೆ. ಪ್ರಸಕ್ತ ಮಂಗಳೂರು-ಬೆಂಗಳೂರು ನಡುವೆ ವಾಹನಗಳು ವಯಾ ಚಾರ್ಮಾಡಿ ಹಾಗೂ ಸಂಪಾಜೆ ಘಾಟ್‌ ಮೂಲಕ ಸಂಚರಿಸುತ್ತಿವೆ.

ಶನಿವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಮೂಡುಬಿದಿರೆಯ ಪುತ್ತಿಗೆಯಲ್ಲಿ ಗರಿಷ್ಠ 95.5 ಮಿಲಿ ಮೀಟರ್‌ ಮಳೆಯಾಗಿದೆ.

ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 27 ಮೀಟರ್‌, ಬಂಟ್ವಾಳ ನೇತ್ರಾವತಿ ನದಿ 5.8 ಮೀಟರ್‌ ಹಾಗೂ ಗುರುಪುರದ ಫಲ್ಗುಣಿ ನದಿ 5.02 ಮೀಟರ್‌ನಲ್ಲಿ ಹರಿಯುತ್ತಿದೆ.

Share this article