ವಿಶ್ವೇಶ್ವರ ಹೆಗಡೆ ಕಾಗೇರಿ ಥರ ಪ್ರಧಾನಿ ಮೋದಿ ಹೆಸರಿನಿಂದ ಗೆದ್ದಿಲ್ಲ: ಶಾಸಕ ಶಿವರಾಮ ಹೆಬ್ಬಾರ್

KannadaprabhaNewsNetwork | Updated : Jul 21 2024, 12:06 PM IST

ಸಾರಾಂಶ

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವುದು ಕಾಗೇರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಪ್ರಚಾರ ಮಾಡಿ ವಿಶ್ವೇಶ್ವರ ಹೆಗಡೆ ಗೆದ್ದಿದ್ದಾರೆ.

  ಶಿರಸಿ :  ಬಿಜೆಪಿಯವರ ಉಪದೇಶ ಕೇಳುವ ಅಗತ್ಯ ನನಗಿಲ್ಲ. ಧೈರ್ಯವಾಗಿ ಕ್ಷೇತ್ರದಲ್ಲಿ ನನ್ನ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಿದ್ದೇನೆ. ಇಂದಿನ ಸಂಸದರ ಹಾಗೆ ಮೋದಿ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದಿಲ್ಲ. ಉತ್ತರ ನೀಡುವ ಸಂದರ್ಭದಲ್ಲಿ ಸರಿಯಾದ ಉತ್ತರ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹಾಲಿ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಗುಡುಗಿದರು.

ಶನಿವಾರ ತಾಲೂಕಿನ ಬನವಾಸಿಯ ಭಾಗದಲ್ಲಿ ನೆರೆ ಪಿಡೀತ ಪ್ರದೇಶ ವೀಕ್ಷಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವುದು ಕಾಗೇರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಪ್ರಚಾರ ಮಾಡಿ ವಿಶ್ವೇಶ್ವರ ಹೆಗಡೆ ಗೆದ್ದಿದ್ದಾರೆ. ನನಗೆ ಮತ ನೀಡಿ ಎಂದು ಎಲ್ಲಿಯೂ ಕಾಗೇರಿ ಕೇಳಿಲ್ಲ. ಮೋದಿಗೆ ಮತ ನೀಡಿ, ಅವರ ಕೈ ಬಲ ಪಡಿಸಿ ಎಂದು ಹೇಳಿದ್ದಾರೆ. ಇದು ನಾನು ಹೇಳಿದ್ದಲ್ಲ. ಅವರೇ ಹೇಳಿರುವುದು. ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ಸಂಸದ ಎಂದು ಪರೋಕ್ಷವಾಗಿ ಸಂಸದ ಕಾಗೇರಿ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಉಪ ಚುನಾವಣೆ ಎದುರಿಸಿದಾಗ ನನ್ನ ಹೆಸರು ಹೇಳಿಕೊಂಡು ಗೆದ್ದಿದ್ದೇನೆ. ನಂತರ ನಡೆದ ಚುನಾವಣೆಯಲ್ಲಿಯೂ ನನ್ನ ಹೆಸರು ಹೇಳಿ, ಜನರ ಬಳಿ ತೆರಳಿ, ಮತ ಕೇಳಿದ್ದೇನೆ. ಕ್ಷೇತ್ರದ ಜನತೆಯು ನನ್ನ ಜತೆ ಇರುವವರೆಗೂ ನನಗೆ ಯಾರ ಭಯವೂ ಇಲ್ಲ. ಇಡಿ ಏನು ಯಾರ ಅಪ್ಪನ ಮನೆಯ ಆಸ್ತಿಯಲ್ಲ. ಇಡಿ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, ಯಾರ ಕಿಸೆಯಲ್ಲಿಯೂ ಇಲ್ಲ. ನಾನೇನೂ ಕಳ್ಳತನ ಮಾಡಿಲ್ಲ. ನನಗೆ ಯಾರ ಭಯವೂ ಇಲ್ಲ. ಎಲ್ಲವನ್ನು ನೋಡಿಯೇ ಸಾರ್ವಜನಿಕ ಜೀವನಕ್ಕೆ ಬಂದಿದ್ದೇನೆ. ಕ್ಷೇತ್ರದ ಜನತೆಯೇ ನನಗೆ ಮುಖ್ಯ ಎಂದು ಹೇಳಿದರು.

ವಾಲ್ಮೀಕಿ, ಮೂಡಾ ಸೇರಿದಂತೆ ಇನ್ನಿತರ ಹಗರಣಗಳು ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರುತ್ತದೆ. ಆರೋಪಿಗಳೆಲ್ಲ ಅಪರಾಧಿಗಳಲ್ಲ. ಅಪರಾಧಿಗಳೆಲ್ಲ ಆರೋಪಿಗಳಲ್ಲ. ಪಕ್ಷಕ್ಕೆ ಮುಜುಗರ ಉಂಟಾಗುವ ಕೆಲಸ ನಾನೇನೂ ಮಾಡಿಲ್ಲ. ಶಾಸಕ ಸಭೆಯಲ್ಲಿ ಬಿಜೆಪಿಯವರಿಗೆ ನನ್ನ ಜತೆ ಗುರುತಿಸಿಕೊಳ್ಳೋಕೆ ಮುಜುಗರ ಆದರೆ ಅವರಿಗೆ ಬಿಟ್ಟಿದ್ದು, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಂತೆ ಕರೆದಿಲ್ಲ. ಅದಕ್ಕೆ ನಾನೂ ಹೋಗಿಲ್ಲ ಎಂದರು.

ಸದ್ಯ ಯಾವ ಪಕ್ಷದಲ್ಲಿದ್ದೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ಹೆಬ್ಬಾರ್, ನಾನು ಮತ್ತು ನನ್ನ ಮಿತ್ರ ಶಾಸಕ ಎಸ್.ಟಿ. ಸೋಮಶೇಖರ ಕಾಂಗ್ರೆಸ್‌ನಲ್ಲೂ ಇಲ್ಲ. ಬಿಜೆಪಿಯಲ್ಲೂ ಇಲ್ಲ. ನಮ್ಮಿಬ್ಬರು ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ ಎಂದು ಹಾರಿಕೆ ಉತ್ತರ ನೀಡಿದ ಅವರು, ನೂತನ ಸಂಸದರಾಗಿ ಆಯ್ಕೆಯಾದ ಮೇಲೆ ಟೀಕೆ ಮಾಡಬೇಕಲ್ಲವೇ? ಸಂಸದನಾಗಿದ್ದೇನೆ ಎಂದು ಜನರಿಗೆ ಗೊತ್ತಾಗಬೇಕಲ್ಲವೇ? ಅವರಿಗೆ ಉತ್ತರ ನೀಡುವ ಸಂದರ್ಭದಲ್ಲಿ ಸರಿಯಾದ ಉತ್ತರ ನೀಡುತ್ತೇನೆ. ನಾವು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದ ನಂತರ ಬಿಜೆಪಿ ಸರ್ಕಾರ ರಚನೆಯಾಗಿ, ಸ್ಪೀಕರ್ ಆಗಿಯೂ ಅಧಿಕಾರ ಅನುಭವಿಸಿಯೂ ಆಯಿತು. ಈಗ ಅದೆಲ್ಲ ಮರೆತು ಹೋದಂತಿದೆ ಎಂದು ಕಾಗೇರಿಯನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಬಸವರಾಜ ದೊಡ್ಮನಿ ಮತ್ತಿತರರು ಇದ್ದರು.

ದೋಣಿಗಾರನ ಅವಶ್ಯಕತೆ ಇಲ್ಲ

ಸರ್ಕಾರ ಬರೋಕೆ ಕಾರಣ ಆದವ್ರು, ಸ್ಪೀಕರ್ ಆಗೋಕೆ ಕಾರಣ ಆದವ್ರು ಯಾರೂ ಬಿಜೆಪಿಗೆ ಕಾಣುತ್ತಿಲ್ಲ. ಎಲ್ಲ ಆಗಿ ಆಯ್ತು. ದೋಣಿ ದಾಟಿದ ಮೇಲೆ ದೋಣಿಗಾರನ ಅವಶ್ಯಕತೆಯಿಲ್ಲ. ಉಚ್ಛಾಟನೆ ಮಾಡಬೇಡಿ ಅಥವಾ ಮಾಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬೇಕಾದರೆ ಬಿಜೆಪಿಯವರು ಉಚ್ಛಾಟನೆ ಮಾಡಲಿ. ನಾನು ರಾಜೀನಾಮೆ ನೀಡುವ ಸಂದರ್ಭದಲ್ಲಿ ನೀಡುತ್ತೇನೆ. ಇವರ ಉಪದೇಶ ಕೇಳುವ ಅವಶ್ಯಕತೆ ಖಂಡಿತ ನನಗಿಲ್ಲ.

ಶಿವರಾಮ ಹೆಬ್ಬಾರ್, ಬಿಜೆಪಿ ಶಾಸಕ

Share this article