ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ಕಾವೇರಿ ನೀರನ್ನು ವ್ಯವಸಾಯಕ್ಕೆ ಕೊಡದೇ ರೈತರು ಕೃಷಿ ಮಾಡಲು ಮುಂದಾಗಬಾರದು ಎಂದು ಘೋಷಣೆ ಮಾಡಿದರೂ ಕೂಡ ಇದಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಈ ಹಿಂದೆ ನಾಲ್ಕು ವರ್ಷಗಳ ಕಾಲ ಸಂಸದರಾಗಿದ್ದ ಕೃಷಿ ಸಚಿವರು ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಯಾವ ರೀತಿ ಪ್ರಯತ್ನ ಪಟ್ಟಿದ್ದಾರೆ ಎಂಬುವುದನ್ನು ಬಹಿರಂಗಪಡಿಸಲಿ. ಅದನ್ನು ಬಿಟ್ಟು ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಒಂದುವರೆ ತಿಂಗಳಲ್ಲಿ ಕಾವೇರಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಕಾಂಗ್ರೆಸ್ ನಾಯಕರು, ಮುಖಂಡರು ಪಲಾಯಾನವಾದ ಮಾಡುತ್ತಿದ್ದಾರೆ ಎಂದು ಹೇಳಿದರು.ಮೊದಲೇ ನಿರ್ಧಾರವಾಗಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಸರ್ವ ಪಕ್ಷಗಳ ಸಭೆಗೆ ಹಲವು ಜೆಡಿಎಸ್ ನಾಯಕರು ಭಾಗವಹಿಸಿದ್ದರು. ಕೇವಲ ಟೀಕೆಗಾಗಿಯೇ ಕುಮಾರಸ್ವಾಮಿ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇದೇ ರೀತಿ ಟೀಕೆ ಮುಂದುವರೆದರೆ ಜೆಡಿಎಸ್ ವತಿಯಿಂದಲೂ ಪ್ರತಿ ಹೇಳಿಕೆ ಕೊಡುವ ಜೊತೆಗೆ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೇಕೆದಾಟುಗಾಗಿ ಡಿಎಂಕೆ ಜೊತೆ ಮಾತನಾಡಲಿ:ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೇಕೆದಾಟು ಅನುಷ್ಠಾನ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮಾಡಿದರು. ತಮಿಳುನಾಡಿನಲ್ಲಿ ಕಾಂಗ್ರೆಸ್ (ಇಂಡಿಯಾ) ಅಂಗಪಕ್ಷವಾದ ಡಿಎಂಕೆ ಪಕ್ಷವೇ ಇದ್ದು, ಮೇಕೆದಾಟು ಯೋಜನೆಗೆ ತಡೆ ತಂದಿದೆ. ಕನಿಷ್ಠ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಟೀಕಿಸಲು ಆತ್ಮಸಾಕ್ಷಿ ಇದೆಯಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದವರಿಂದ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ಮಂತ್ರಿಯಾಗಿರುವುದನ್ನು ಅರಗಿಸಿಕೊಳ್ಳಲಾಗದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.ಕುಮಾರಸ್ವಾಮಿ ಅವರು ಸಂಸದರಾದ ಒಂದೂವರೆ ತಿಂಗಳಲ್ಲಿ ಕೇಂದ್ರ ಮಂತ್ರಿಯಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದರು. ಅಧಿಕಾರಿಗಳನ್ನು ಸಭೆಗೆ ಹೋಗದಂತೆ ಷರಾ ಹೊರಡಿಸುವುದು ರಾಜ್ಯ ಸರ್ಕಾರದ ಸಾಧನೆಯಾಗಿದೆ ಎಂದು ಕಿಡಿಕಾರಿದರು.
ಸಚಿವ ಚಲುವರಾಯಸ್ವಾಮಿ ಅವರು ಸಂಸದರು, ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಿ ಕೂಡಲೇ ಕ್ಷಮೆಯಾಚಿಸಬೇಕು. ಇದೇ ರೀತಿ ಮುಂದುವರಿಸಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ಪುಟ್ಟುಬುದ್ದಿ, ಪುರಸಭೆ ಸದಸ್ಯರಾದ ನೂರುಲ್ಲಾ, ಸಿದ್ದರಾಜು, ನಾಗೇಶ್, ಮುಖಂಡರಾದ ಕಾಂತರಾಜು, ರಾಜಣ್ಣ, ನಾಗರಾಜು ಸೇರಿ ಇತರರು ಇದ್ದರು.