ಪಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ

KannadaprabhaNewsNetwork |  
Published : Apr 28, 2025, 12:49 AM IST
37 | Kannada Prabha

ಸಾರಾಂಶ

ದೇಶ ಪ್ರಬುದ್ಧರಾಗಬೇಕಾದರೆ ಎಲ್ಲರೂ ಉದ್ಧಾರ ಆಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು.

ಕನ್ನಡಪ್ರಭ ವಾರ್ತೆ ಮೈಸೂರುಪೆಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ ಆಕ್ರೋಶ ವ್ಯಕ್ತಪಡಿಸಿದರು.ಮೈಸೂರಿನ ಪೊಲೀಸ್ ಬಡಾವಣೆಯ (ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ ಹಾಗೂ ಐಪಿಎಸ್ ಶ್ರೀನಿವಾಸನ್ ನಗರ) ಜೈಭೀಮ್ ಬಂಧು ಬಳಗದ ಆಶ್ರಯದಲ್ಲಿ ಸಮಾನ ಮನಸ್ಕರ ವೇದಿಕೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕರುಣೆ, ಮಾನವೀಯತೆ ಮತ್ತು ಪ್ರೀತಿ ಇಲ್ಲದ ದೇಶ ನಾಶವಾಗಲಿದೆ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿತ ಮಿಗಿಲು. ಭಾರತ ಇತರೆ ದೇಶಕ್ಕಿಂತ ಭಿನ್ನ ಎಂಬುದು ಈಗಾಗಲೇ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.ದೇಶ ಪ್ರಬುದ್ಧರಾಗಬೇಕಾದರೆ ಎಲ್ಲರೂ ಉದ್ಧಾರ ಆಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಾದ ಕೆಲಸ ಮಾಡಲಿಲ್ಲ. ಎಲ್ಲಾ ಜಾತಿಗೆ ಹಕ್ಕು, ಅಧಿಕಾರ ತಂದುಕೊಟ್ಟರು. ಹಿಂದೂ ಕೋಡ್ ಬಿಲ್ ಜಾರಿಗೆ ಅವಿರತ ಶ್ರಮಿಸಿದರು. ಸಮಾನ ಕೆಲಸ ಸಮಾನ ವೇತನ ಜಾರಿಗೆ ಶ್ರಮಿಸಿದರು. ಕಾರ್ಮಿಕ ಯಂತ್ರವಲ್ಲ ಎಂಬ ವಿಚಾರವನ್ನು ಮುಂದೆ ತಂದರು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರು ಎಂದು ಅವರು ಹೇಳಿದರು.ವೈಚಾರಿಕ ಭಾವನೆ ಅಗತ್ಯ:

ಭಾರತ ಇಂದು ರೋಗಗ್ರಸ್ತವಾಗಿದೆ. ಯಾವ ಸಮಾಜ, ಧರ್ಮ ಮತ್ತೊಂದು ಸಮಾಜವನ್ನು ಕಡೆಗಣಿಸುತ್ತದೋ ಅದು ಧರ್ಮವೇ ಅಲ್ಲ. ಧರ್ಮ ಎಂದರೆ ವೈಚಾರಿಕ ಭಾವನೆ ಹೊಂದಿರಬೇಕು, ಕಿಡಿಗೇಡಿ ಮನಸ್ಥಿತಿ ಇರಬಾರದು. ಮಾನವೀಯ ಮೌಲ್ಯ, ಗುಣಗಳನ್ನು ಹೊಂದಿರಬೇಕು ಎಂದು ಅವರು ಆಶಿಸಿದರು.

ಬೇರೆಯವರ ಬಗ್ಗೆ ಮಾತನಾಡಿ ಕಾಲಾಹರಣ ಮಾಡಬೇಡಿ. ಬುದ್ಧ ದಮ್ಮ ಮಾನವೀಯ ಸಾಗರ. ಅದನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿ. ಸೆಲ್ಫ್ ಕರೆಕ್ಷನ್ ಬಹಳ ಮುಖ್ಯ. ಅಸೂಯೆ ಪ್ರಪಂಚದಲ್ಲಿ ನಮ್ಮ ಸಾಧನೆ ಮುಖ್ಯ. ಅನ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂದರ್ಭ ಎದುರಾದಲ್ಲಿ ಮೂಕವಾಗಿರಿ. ಮನದೊಳಗಿನ ಕಿಚ್ಚು ಮನಸ್ಸನ್ನು ಸುಡಲಿದೆ, ಮೊದಲು ತನ್ನನ್ನು ಸುಡಲಿದೆ, ಆದ್ದರಿಂದ ತಟಸ್ಥವಾಗಿರಿ. ಎಷ್ಟೋ ಸಂದರ್ಭದಲ್ಲಿ ಮೌನ ಹಾಗೂ ನಗು ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಲಿದೆ ಎಂದು ಸೂಕ್ಷ್ಮವಾಗಿ ನುಡಿದರು.

ಪ್ರಜ್ಞೆ ಜೊತೆಗೆ ಶೀಲ ಮುಖ್ಯ, ಶೀಲದ ಜೊತೆಗೆ ಮೈತ್ರಿ ಮುಖ್ಯ. ವಿದ್ಯೆಯಿದ್ದರೂ ವಿನಯ ಮುಖ್ಯ. ಅದರೊಂದಿಗೆ ಸಚ್ಚಾರಿತ್ರ್ಯ ಎನ್ನುವುದು ಕೂಡ ಮುಖ್ಯ ಎಂದು ಅವರು ಮಾರ್ಮಿಕವಾಗಿ ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್, ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ಎಸ್. ಸುಂದರರಾಜ್, ಆಲನಹಳ್ಳಿ ಪೊಲೀಸ್ ಠಾಣೆ ಇನ್‌ ಸ್ಪೆಕ್ಟರ್‌ ಸ್ವರ್ಣ, ಬಳಗದ ಅಧ್ಯಕ್ಷ ವೈ.ಎಂ. ರಂಗಸ್ವಾಮಿ, ಪದಾಧಿಕಾರಿಗಳಾದ ಮೋಹನ್, ಶಿವಸ್ಚಾಮಿ, ಸಿದ್ದೇಶ್, ಶಾಂತರಾಜು, ಶ್ರೀನಿವಾಸ್ ಪ್ರಸಾದ್, ನಾಗರಾಜು, ಶಿವರಾಮಚಂದ್ರ ಮೊದಲಾದವರು ಇದ್ದರು.ಈ ವೇಳೆ ಬಳಗದ ಸದಸ್ಯ ಪ್ರವೀಣ್ ಸಂವಿಧಾನ ಪೀಠಿಕೆ ಬೋಧಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ