ಚಂದ್ರಕಾಂತ ಬೆಲ್ಲದ ಬಣಕ್ಕೆ ಸೋಲುಣಿಸಲು ಲಿಂಬಿಕಾಯಿ ವಿಫಲ!

KannadaprabhaNewsNetwork |  
Published : May 27, 2025, 12:30 AM IST

ಸಾರಾಂಶ

ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ನೇತೃತ್ವದಲ್ಲಿ ಲಿಂಬಿಕಾಯಿ ಕಟ್ಟಿದ್ದ ಬಣದ ಯಾವ ಒಬ್ಬ ಸದಸ್ಯರೂ ಗೆಲ್ಲದೇ ಸೋಲಿನ ಕಹಿ ಅನುಭವಿಸಿದರು. ಲಿಂಬಿಕಾಯಿ ಬಣದ ಅಭ್ಯರ್ಥಿಗಳು ಹಾಲಿ ತಂಡಕ್ಕೆ ತುಂಬ ಸ್ಪರ್ಧೆ ನೀಡಿತು. ಆದರೆ, ಬಹುತೇಕ ಮತದಾರರು ಲಿಂಬಿಕಾಯಿ ಬಣವನ್ನು ಸಂಘಕ್ಕೆ ಸ್ವೀಕರಿಸಲಿಲ್ಲ.

ಧಾರವಾಡ: ಚಂದ್ರಕಾಂತ ಬೆಲ್ಲದ ಅವರಿಗೆ ವಯಸ್ಸಾಗಿದೆ. ಮನೆಯಲ್ಲಿ ಕೂರಬಹುದಿತ್ತು. ಸಂಘದ ಚುನಾವಣೆ ಬೇಕಿತ್ತಾ ಎಂದು ಪ್ರಶ್ನಿಸುವ ಮೂಲಕ ಬೆಲ್ಲದ ವಿರುದ್ಧ ಚುನಾವಣೆಯಲ್ಲಿ ನಾಡೋಜ ಡಾ. ಪಾಪು ಹೆಸರಿನ ಬಣ ಕಟ್ಟಿಕೊಂಡು ಬಂದಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಪ್ರಯತ್ನ ಅಂತಿಮವಾಗಿ ಕೈ ಚೆಲ್ಲಿದೆ.

ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ನೇತೃತ್ವದಲ್ಲಿ ಲಿಂಬಿಕಾಯಿ ಕಟ್ಟಿದ್ದ ಬಣದ ಯಾವ ಒಬ್ಬ ಸದಸ್ಯರೂ ಗೆಲ್ಲದೇ ಸೋಲಿನ ಕಹಿ ಅನುಭವಿಸಿದರು. ಲಿಂಬಿಕಾಯಿ ಬಣದ ಅಭ್ಯರ್ಥಿಗಳು ಹಾಲಿ ತಂಡಕ್ಕೆ ತುಂಬ ಸ್ಪರ್ಧೆ ನೀಡಿತು. ಆದರೆ, ಬಹುತೇಕ ಮತದಾರರು ಲಿಂಬಿಕಾಯಿ ಬಣವನ್ನು ಸಂಘಕ್ಕೆ ಸ್ವೀಕರಿಸಲಿಲ್ಲ.

ತಂಡ ಸೋಲಲು ಕಾರಣವಿದು?: ಇದೇ ಮೊದಲ ಬಾರಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಒಂದು ಬಣದ ಎಲ್ಲ ಅಭ್ಯರ್ಥಿಗಳು ಜಯದ ದಡ ಸೇರಿದ್ದು. ಕಳೆದ ಕೆಲವು ಚುನಾವಣೆಗಳಲ್ಲಿ ಎರಡು ಬಣಗಳಲ್ಲಿನ ಅಭ್ಯರ್ಥಿಗಳು ಸೇರಿ ಸಂಘವನ್ನು ಮುನ್ನಡೆಸಿದ್ದರು. ಸೋಲು ಕಂಡಿರುವ ಲಿಂಬಿಕಾಯಿ ಬಣದಲ್ಲಿನ ಪ್ರಕಾಶ ಉಡಿಕೇರಿ ಹಾಗೂ ಮನೋಜ ಪಾಟೀಲ ಈ ಮೊದಲು ಸಂಘದಲ್ಲಿ ಕಾರ್ಯ ಮಾಡಿದ್ದಾರೆ. ಉಡಿಕೇರಿ ಪ್ರಧಾನ ಕಾರ್ಯದರ್ಶಿಯಾಗಿ, ಮನೋಜ ಪಾಟೀಲ ಕಾರ್ಯಕಾರಿಣಿ ಸಮಿತಿಯಲ್ಲಿದ್ದರು. ಒಂದು ಅಂದಾಜಿನಂತೆ ಕನಿಷ್ಠ ಇವರಿಬ್ಬರಾದರೂ ಈ ಚುನಾವಣೆಯಲ್ಲಿ ಗೆಲವು ಸಾಧಿಸಿಬಹುದಿತ್ತು. ಆದರೆ, ವಿಶ್ಲೇಷಣೆ ಪ್ರಕಾರ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಬಣ ರಚಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇ ಇಡೀ ತಂಡ ಸೋಲು ಅನುಭವಿಸಲು ಕಾರಣ ಎಂಬ ಮಾತುಗಳು ಸಂಘದ ಆವರಣದಲ್ಲಿ ಕೇಳಿ ಬರುತ್ತಿವೆ.

ಸಂಘಕ್ಕೆ ಬಿಜೆಪಿ ಬಲ: ಯಾವಾಗ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಲಿಂಬಿಕಾಯಿ ಸ್ಪರ್ಧೆ ಖಚಿತವಾಯಿತೋ ಆಗ, ಬೆಲ್ಲದ ಬಣದ ತಂಡವೂ ಎಚ್ಚೆತ್ತುಕೊಂಡಿತು. ಆದರಲ್ಲೂ ತಂದೆಯ ಚುನಾವಣೆಯನ್ನು ತೀವ್ರ ಗಂಭೀರ ಹಾಗೂ ಪ್ರತಿಷ್ಠೆಯಾಗಿ ತೆಗೆದುಕೊಂಡ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪಕ್ಷದ ಬಲವನ್ನು ಬಳಸಿಕೊಂಡು ಕ್ರಿಯಾಶೀಲವಾಗಿ ಕಾರ್ಯ ಮಾಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ಫಲಿತಾಂಶ ಬರುತ್ತಿದ್ದಂತೆ ಕೆಲವು ಬಿಜೆಪಿ ಮುಖಂಡರು ಸಂಘಕ್ಕೆ ಬಂದು ಪಟಾಕಿ ಹಾರಿಸಿ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದೇ ಇದಕ್ಕೆ ಸಾಕ್ಷಿ.

ಇದರೊಂದಿಗೆ ಹಾಲಿ ಗೆದ್ದಿರುವ ತಂಡ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ. ನಿರಂತರವಾಗಿ ಮತದಾರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ, ಲಿಂಬಿಕಾಯಿ ಬಣ ಕಳೆದ 15 ದಿನಗಳಿಂದ ಕ್ರಿಯಾಶೀಲವಾಗಿದ್ದು, ಹಾಲಿ ತಂಡದಷ್ಟು ಪರಿಣಾಮಕಾರಿಯಾಗಿ ಮತದಾರರನ್ನು ತಲುಪಲು ಹಾಗೂ ಅವರ ಮನವೊಲಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಇಡೀ ತಂಡ ಸೋಲಿನ ಪರಿಣಾಮ ಎದುರಿಸಬೇಕಾಯಿತು ಎಂಬ ಮಾತುಗಳು ಕೇಳಿ ಬಂದವು.

ಹುದ್ದಾರ ಬದಲಿ ತೋಡಕರ: ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ ಬಣದ ಎಲ್ಲ 15 ಅಭ್ಯರ್ಥಿಗಳು ವಿಜೇತರಾಗಿದ್ದು, ಈ ಪೈಕಿ 14 ಅಭ್ಯರ್ಥಿಗಳು ಪುನಾರಾಯ್ಕೆಯಾಗಿದ್ದು, ಒಬ್ಬರು ಮಾತ್ರ ಹೊಸಬರು. ಕಳೆದ ತಂಡದಲ್ಲಿ ಡಾ. ಶ್ರೀಶೈಲ ಹುದ್ದಾರ ಬದಲಿಗೆ ಈ ಬಾರಿ ಡಾ. ಶಶಿಧರ ತೋಡಕರ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಅವರು ಗೆಲವು ಸಾಧಿಸಿದ್ದಾರೆ.

ನಿರೀಕ್ಷೆ ಹುಸಿ: ಕರ್ನಾಟಕ ವಿದ್ಯಾವರ್ಧಕ ಸಂಘದ ಈ ಬಾರಿಯ ಚುನಾವಣೆ ಎಲ್ಲ ಹಂತಗಳನ್ನು ಗಮನಿಸಿದರೆ, ಯಾವುದೇ ಒಂದು ಬಣಕ್ಕೆ ಬಹುಮತ ಕಷ್ಟಸಾಧ್ಯ ಎನ್ನಲಾಗಿತ್ತು. ಕೊನೆ ಕ್ಷಣದ ವರೆಗೂ ಇದೇ ಅಭಿಪ್ರಾಯಗಳು ಮೂಡಿ ಬಂದಿದ್ದವು. ಆದರೆ, ಚುನಾವಣಾ ನಿರೀಕ್ಷೆಯನ್ನು ಚಂದ್ರಕಾಂತ ಬೆಲ್ಲದ ಅವರ ಬಣವು ಹುಸಿ ಮಾಡಿ ಸಂಪೂರ್ಣ ಎಲ್ಲ ಹುದ್ದೆಗಳನ್ನು ಎರಡೂ ಕೈಯಿಂದ ಬಾಚಿಕೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ