ಕನ್ನಡಪ್ರಭ ವಾರ್ತೆ ಸುವರ್ಣಸೌಧ
ರಾಜ್ಯದಲ್ಲಿ ಈ ಹಿಂದೆ ನಡೆಸಲಾದ ಜಾತಿ ಗಣತಿಯ ವರದಿಯನ್ನು ಅಂಗೀಕರಿಸಬಾರದು. ವೈಜ್ಞಾನಿಕವಾಗಿ ಹೊಸದಾಗಿ ಜಾತಿ ಗಣತಿ ನಡೆಸಬೇಕೆಂದು ಒತ್ತಾಯಿಸಿ ವೀರಶೈವ- ಲಿಂಗಾಯತ ಸಮುದಾಯಕ್ಕೆ ಸೇರಿದ ಸಚಿವರು ಹಾಗೂ ಶಾಸಕರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.ವೀರಶೈವ-ಲಿಂಗಾಯತ ಶಾಸಕರ ಪಕ್ಷಾತೀತ ನಿಯೋಗ ಸುವರ್ಣಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದೆ.
ನಾವು ಜಾತಿ ಗಣತಿಯ ವಿರೋಧಿಗಳಲ್ಲ. ಆದರೆ ಕಳೆದ 8 ವರ್ಷದ ಹಿಂದೆ ನಡೆಸಲಾದ ಸಾಮಾಜಿಕ- ಆರ್ಥಿಕ ಸಮೀಕ್ಷೆಯು ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದೆ. ಯಾವ ಸರ್ಕಾರಿ ಅಧಿಕಾರಿಗಳೂ ಮನೆಗಳಿಗೆ ಭೇಟಿ ನೀಡಿಲ್ಲ. ತಮ್ಮ ಕುಟುಂಬದ ಯಾವುದೇ ಮಾಹಿತಿ ಪಡೆದಿಲ್ಲ. ಕಚೇರಿಗಳಲ್ಲಿಯೇ ಕುಳಿತು ಈ ಸಮೀಕ್ಷಾ ವರದಿ ಸಿದ್ಧಪಡಿಸಿ ಕಳುಹಿಸಿದ್ದಾರೆ. ಮಿಗಿಲಾಗಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆದಾಗ ವೀರಶೈವ - ಲಿಂಗಾಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನ್ಯಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದೇ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಹೀಗಾಗಿ ಇದನ್ನು ಅಂಗೀಕರಿಸಿದರೆ ನಮ್ಮ ಸಮುದಾಯಕ್ಕಷ್ಟೇ ಅಲ್ಲ ಶೋಷಿತರು, ಮಧ್ಯಮ ವರ್ಗದ ಆರ್ಥಿಕ ದುರ್ಬಲರಿಗೆ ಘೋರ ಅನ್ಯಾಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸುವುದು ಸಂಪ್ರದಾಯವಾಗಿದೆ. ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ 8 ವರ್ಷದಷ್ಟು ಹಳೆಯದಾಗಿದೆ. ಆದಕಾರಣ ಇದನ್ನು ಯಥಾವತ್ ಅಂಗೀಕರಿಸುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜ್ಞಾನಿಕವಾಗಿ ಹೊಸದಾಗಿ ಜಾತಿ ಜನಗಣತಿ ನಡೆಸಿ ವಾಸ್ತವಾಂಶ ಆಧಾರಿತವಾಗಿ ಅಂಕಿ- ಅಂಶ ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಹೀಗಾಗಿ ಹೊಸದಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕು. ಇದಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ತಿಳಿಸಲಾಗಿದೆ.
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದ ನಿಯೋಗವು ಈ ಮನವಿಯನ್ನು ನೀಡಿದೆ.ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಶಾಸಕರಾದ ಅಶೋಕ ಪಟ್ಟಣ, ಎಂ.ವೈ.ಪಾಟೀಲ, ಬಸವರಾಜ ರಾಯರೆಡ್ಡಿ, ಸಿ.ಸಿ.ಪಾಟೀಲ, ಜಿ.ಎಸ್.ಪಾಟೀಲ, ಕೆ.ಷಡಕ್ಷರಿ, ಯಶವಂತರಾಯಗೌಡ ಪಾಟೀಲ, ಡಿ.ಜಿ.ಶಾಂತನಗೌಡ, ಬಿ.ಕೆ.ಸಂಗಮೇಶ್ವರ, ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಬಾಬಾಸಾಹೇಬ ಪಾಟೀಲ, ಸಿದ್ದು ಸವದಿ, ವಿಜಯಾನಂದ ಕಾಶಪ್ಪನವರ, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಶರಣು ಸಲಗರ, ಮಹಾಂತೇಶ ಕೌಜಲಗಿ, ಜಗದೀಶ ಗುಡಗುಂಟಿ, ಅಲ್ಲಮಪ್ರಭು ಪಾಟೀಲ, ಸಿದ್ದಲಿಂಗಪ್ಪ ನಾಗಭೂಷಣ ಪಾಟೀಲ, ವಿನಯ ಕುಲಕರ್ಣಿ, ಡಾ.ಶೈಲೇಂದ್ರ ಬೆಲ್ದಾಳೆ, ಎಂ.ಆರ್.ಪಾಟೀಲ, ಯು.ಬಿ.ಬಣಕಾರ, ಗಣೇಶ ಪ್ರಕಾಶ ಹುಕ್ಕೇರಿ, ಮಹೇಶ ಟೆಂಗಿನಕಾಯಿ, ಎಚ್.ಎಂ.ಗಣೇಶಪ್ರಸಾದ, ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಶಾಸಕರು ನಿಯೋಗದಲ್ಲಿದ್ದರು.