ಜಿಲ್ಲೆಯಲ್ಲೂ ಲಿಂಗಾಯತರ ಮೂಲೆಗುಂಪು: ಅಪ್ಪಾರಾವ್

KannadaprabhaNewsNetwork | Published : Oct 6, 2023 12:06 PM

ಸಾರಾಂಶ

ಇದೇ ಪರಿಸ್ಥಿತಿ ಮುಂದುವರಿದರೆ ಜನ ಜಾಗೃತಿ ಪಾದಯಾತ್ರೆಯ ಬೆದರಿಕೆ, ಶಾಮನೂರು ಹೇಳಿಕೆಗೆ ಕಲಬುರಗಿಯಲ್ಲಿ ಭಾರಿ ಬೆಂಬಲ
ಕಲಬುರಗಿ: ಕಲಬುರಗಿ ಜಿಲ್ಲಾಡಳಿತದಲ್ಲಿಯೂ ಒಬ್ಬರೂ ಆಯಕಟ್ಟಿನ ಸ್ಥಾನದಲ್ಲಿ ಲಿಂಗಾಯತ ಸಮಾಜಕ್ಕೆ ಸೇರಿದ ಅಧಿಕಾರಿಗಳಿಲ್ಲ, ಒಬ್ಬ ಲಿಂಗಾಯತ ಸಮಾಜದವರು ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲ ಎಂದು ಸ್ವಾಮೀಜಿಗಳು, ಹೋರಾಟಗಾರರು ಧ್ವನಿ ಎತ್ತಿದ್ದಾರೆ. ಇದೇ ವಿಷಯವಾಗಿ ಬಹಿರಂಗ ಹೇಳಿಕೆ ನೀಡಿರುವ ಶ್ರೀನಿವಾಸ್ ಸರಡಗಿ ಮಹಾಲಕ್ಷ್ಮೀ ಶಕ್ತಿ ಪೀಠದ ಡಾ. ಅಪ್ಪಾರಾವ್ ದೇವಿ ಮುತ್ಯಾ ಅವರು ಕೂಡಲೇ ಸರ್ಕಾರವು ಲಿಂಗಾಯತರಿಗೆ ಆದ ಅನ್ಯಾಯ ಸರಿಪಡಿಸದೆ ಹೋದಲ್ಲಿ ಕಲ್ಯಾಣ ಕರ್ನಾಟಕದ ಬಸವಕಲ್ಯಾಣದಿಂದ ಬೆಂಗಳೂರುವರೆಗೆ ಸಮಾಜವು ಜಾಗೃತಿ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಇಲ್ಲ ಎಂಬ ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಕಲಬುರಗಿಯಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪಕ್ಷದ ವರಿಷ್ಠರು ಸ್ಪಂದಿಸಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ನಿರ್ಲಕ್ಷಿಸಿದರೆ ದಾವಣಗೆರೆ ದಣಿಯ ಧ್ವನಿ ಅಡಗಿಸಲು ಹೊರಟರೆ ಮಠಾಧೀಶರು, ಲಿಂಗಾಯತ ಸಮಾಜದವರು ಅವರ ಧ್ವನಿಗೆ ಧ್ವನಿ ಕೂಡಿಸಬೇಕಾಗುತ್ತದೆ ಎಂದರು. ಅಧಿಕಾರಿಗಳನ್ನು ಜಾತಿ ಆಧಾರದ ಮೇಲೆ ಹುದ್ದೆ ನೀಡಬಾರದು. ಆದರೆ, ಯೋಗ್ಯತೆ ಇದ್ದರೂ ಲಿಂಗಾಯತ ಎನ್ನುವ ಕಾರಣದಿಂದ ದೂರ ಇಡುವುದು ಯಾವ ನ್ಯಾಯ? ಮನನೊಂದೇ ಶಾಮನೂರು ಶಿವಶಂಕರಪ್ಪ ಅವರು ದೃಢ ನಿರ್ಧಾರದಿಂದ ಲಿಂಗಾಯತ ಅಧಿಕಾರಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಧ್ವನಿಗೆ ಧ್ವನಿಗೂಡಿಸಬೇಕಾದದ್ದು ಮಠಾಧೀಶರ, ಲಿಂಗಾಯತ ಸಮಾಜದ ಮುಖಂಡರ ಕರ್ತವ್ಯ ಎಂದರು. ಹಿಂದೆಯೂ ಯಡಿಯೂರಪ್ಪಗೆ ಅನ್ಯಾಯ ಆಗುತ್ತದೆ ಎಂದಾಗ ನಾಡಿನ ಮಠಾಧೀಶರೆಲ್ಲರೂ ಒಂದು ಬಾರಿ ಅಲ್ಲ, ಹಲವಾರು ಬಾರಿ ಅವರ ಪರ ನಿಂತಿದ್ದರು. ಈಗ ಶಾಮನೂರು ಮತ್ತು ಲಿಂಗಾಯತ ಅಧಿಕಾರಿಗಳ ನಿಲ್ಲಬೇಕಾದದ್ದು ನಮ್ಮ ಕರ್ತವ್ಯ. ಶಾಮನೂರು ಹೇಳಿಕೆಗೆ ವರಿಷ್ಠರು ಸ್ಪಂದಿಸಬೇಕು. ನಿರ್ಲಕ್ಷ್ಯ ಮಾಡಬಾರದೆಂದರು. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಸೇರಿದ್ದರು. ಇಡೀ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗುವುದನ್ನು ನೋಡಿ ಸುಮ್ಮನೆ ಕೂಡಬಾರದು. ಕೂಡಲೇ ಲಿಂಗಾಯತ ಅಧಿಕಾರಿಗಳಿಗೆ ನ್ಯಾಯ ಒದಗಿಸಬೇಕು ಎಂದರು. ಕಲಬುರಗಿಯಲ್ಲಿ ಐಎಎಸ್, ಐಪಿಎಸ್ ಹುದ್ದೆಗಳಿದ್ದರೂ ಒಬ್ಬರೂ ಲಿಂಗಾಯತರಿಲ್ಲ. ಅದು ಹೋಗಲಿ ಸಿಪಿಐ, ಪಿಎಸ್‍ಐ ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಇದು ಅನ್ಯಾಯದ ಪರಮಾವಧಿ, ಇದು ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಶಾಸಕರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವೀರಭದ್ರ ಶಿವಾಚಾರ್ಯರು, ನೀಲೂರಿನ ಶರಣಯ್ಯ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಭೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ್ ಉಪಸ್ಥಿತರಿದ್ದರು.

Share this article