ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ, ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಪ್ರತಿಪಾದನೆ
ಲಿಂಗಾಯತ ಅನ್ನೋದು ಜಾತಿಯಲ್ಲ. ಅದೊಂದು ತತ್ವ, ಸಿದ್ಧಾಂತ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್‌ನ ದಾವಣಗೆರೆ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನೆ, ನಡೆ-ನುಡಿಗಳ ಶುದ್ಧಿ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳುವವರೇ ಲಿಂಗಾಯತರು, ಅಂಗದ ಮೇಲೆ ಲಿಂಗ ಧರಿಸಿ, ಪೂಜೆ ಮಾಡುವವರು ಮಾತ್ರ ಲಿಂಗಾಯತರು. ಲಿಂಗಾಯತತನವು ಹುಟ್ಟಿನಿಂದ ಬರುವುದಿಲ್ಲ. ಸಾಧನೆಯಿಂದ ಮಾತ್ರ ಬರುತ್ತದೆ. ನನ್ನ ತಂದೆ, ತಾಯಿ ಲಿಂಗಾಯತರು. ನಾನು ಲಿಂಗಾಯತನೆಂದರೆ ಆಗಲ್ಲ ಎಂದು ತಿಳಿಸಿದರು.ಒಂದೆಡೇ ವೈದಿಕ ಪರಂಪರೆ ಅಪ್ಪಿಕೊಂಡು, ಇನ್ನೊಂದೆಡೆ ಬಸವ ತತ್ವ ಇರಬೇಕೆನ್ನುತ್ತೇವೆ. ಅದೂ ಇರಲಿ, ಇದೂ ಇರಲಿಯೆಂದರೆ ಶರಣ ತತ್ವ ಒಪ್ಪುವುದಿಲ್ಲ. ನಾವೇ ಪಾಲಿಸದಿದ್ದರೆ, ಇನ್ನೊಬ್ಬರಿಗೆ ಹೇಳುವ ನೈತಿಕತೆ ಕಳೆದುಕೊಳ್ಳುತ್ತೇವೆ. ಶರಣರ ನಡೆ-ನುಡಿ ಒಂದಾಗದಿದ್ದರೆ ಬಸವ ತತ್ವದಿಂದ ಸಂಪೂರ್ಣ ದೂರವಿದ್ದೇವೆ. ಬಸವ ಪರಂಪರೆ ಒಪ್ಪಿಕೊಂಡವರು ವೈದಿಕ ಪರಂಪರೆ ದೂರವಿಡಬೇಕು. ವೈದಿಕ ಮತ್ತು ಬಸವ ಪರಂಪರೆ ಎರಡೂ ಇರಲೆಂದರೆ ಬಸವತತ್ವ ಅದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಶಸಾಪ ಚನ್ನಗಿರಿ ತಾಲೂಕು ಗೌರವಾಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಲಿಂಗವಂತರಾದ ಬಳಿಕ ಕಾಯಕ ಮಾಡಿ, ಜೀವಿಸಬೇಕು. ಕಾಯಕವಿದ್ದಲ್ಲಿ ಕೈಲಾಸವಿದೆಯೆಂದು ಶರಣರು ಸಾರಿದ್ದಾರೆ. ಹಾಗಾಗಿ ಲಿಂಗವಂತರಾದ ಶರಣರು ದುಡಿದು ತಿನ್ನಬೇಕು. ಎಲ್ಲಕ್ಕಿಂತ ಮೊದಲು ಪರಿಷತ್‌ನ ಎಲ್ಲಾ ಪದಾಧಿಕಾರಿಗಳು ಲಿಂಗ ಧರಿಸಬೇಕು ಎಂದರು.
ನಮ್ಮಲ್ಲಿ ಧ್ವಂಧ್ವ ಮನೋಭಾವ ಇದ್ದಲ್ಲಿ ಒಂದು ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ. ಮೊದಲಿಗೆ ಶರಣ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಬೇಕು. ಪರಿಷತ್‌ನ ಎಲ್ಲಾ ಚಟುವಟಿಕೆಗಳು ಬಸವ ತತ್ವದ ಹಾದಿಯಲ್ಲಿ ನಡೆಯಲಿದೆ. ಲಿಂಗಾಯತ ಎನ್ನುವುದು ಜಾತಿಯಲ್ಲ. ಅದೊಂದು ತತ್ವ ಸಿದ್ಧಾಂತವೆಂಬುದು ಎಲ್ಲರೂ ಅರಿಯಬೇಕು.
.....................................................ಮನ ಮೆಚ್ಚಿ ನಡೆಯುವುದು ಮುಖ್ಯ: ಸಾಣೇಹಳ್ಳಿ ಶ್ರೀ