ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪುರಸಭೆಯಿಂದ ಎನ್‌ಒಸಿ ಪಡೆಯದೇ ಅರಕಲಗೂಡು ರಸ್ತೆಯ ಹೆದ್ದಾರಿ ಪಕ್ಕದಲ್ಲೇ ಬಾರ್ ತೆರೆದಿದ್ದಾರೆ, ಬಾರ್‌ಗೆ ಎನ್‌ಒಸಿ ಇಲ್ಲದೇ ಹೇಗೆ ಪರವಾನಗಿ ನೀಡಿದ್ದಾರೊ ಗೊತ್ತಿಲ್ಲ ಮತ್ತು ಈ ಬಾರ್‌ನಿಂದ ಪ್ರತಿ ವರ್ಷ ಐದಾರು ಜನ ಸಾಯುತ್ತಿದ್ದಾರೆ, ಅವರ ಹೆಂಡತಿ ಮಕ್ಕಳ ಗತಿಏನ್ರಿ. ಆದ್ದರಿಂದ ಪುರಸಭೆ ವತಿಯಿಂದ ಬಾರ್ ಜಪ್ತಿ ಮಾಡಿ ಜತೆಗೆ ಮಾಲೀಕ, ಅಬಕಾರಿ ಇಲಾಖೆ ಹಾಗೂ ಜಿಲ್ಲಾಧಿಕಾರಿ ಮೇಲೆ ಪ್ರಕರಣ ದಾಖಲಿಸಿ ಎಂದು ಶಾಸಕ ಎಚ್. ಡಿ. ರೇವಣ್ಣ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ವಾರದಲ್ಲಿ ನಾಲ್ಕು ದಿನ ನಮ್ಮ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಕರೆದು ಕೂರಿಸಿಕೊಳ್ಳತ್ತಾರೆ, ಡಿಸಿ ಕಚೇರಿಯಲ್ಲಿ ತಹಸೀಲ್ದಾರ್‌ಗೆ ಏನ್ ಕೆಲಸರೀ, ಆದ್ದರಿಂದ ಶಾಸಕರು ತಹಸೀಲ್ದಾರ್ ಅವರನ್ನು ಭೇಟಿ ಮಾಡಲು ದಿನಾಂಕ ನಿಗದಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದರು. ಹಾಸನದ ನಗರಸಭೆ ಕಮಿಷನರ್ ಅವರನ್ನು ಕೆಲಸ ಮಾಡಿಲ್ಲವೆಂದು ಹೆದರಿಸಿ, ರಜಾ ಹಾಕಿಸುತ್ತಾರೆ. ಪ್ರಾಮಾಣಿಕ ಅಧಿಕಾರಿ ಕೆಲಸ ಮಾಡಲಾಗ್ತಿಲ್ಲ, ಎಡಿಸಿ ಇನ್ನೂ ಬಂದಿಲ್ಲ, ೬ ತಿಂಗಳಿಂದ ಡೀಮ್ಡ್ ಫಾರೆಸ್ಟ್‌ನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ನೀಡಲು ಇನ್ನೂ ಆಗಿಲ್ವೇನ್ರಿ, ಈಗಾದರೇ ಹೇಗ್ರಿ ಎಂದು ಪ್ರಶ್ನಿಸಿ, ಈ ತರಹದ ಕಾರ್ಯದಿಂದಾಗಿ ನಾ ಏನು ಮಾಡಲು ಸಾಧ್ಯ ಎಂದರು.
ನಮ್ಮ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಟ್ಕ, ಅಂಗಡಿಗಳಲ್ಲಿ ಮದ್ಯ ಮಾರಾಟ ವ್ಯಾಪಕವಾಗಿದೆ, ಮೊಸಳೆಹೊಸಳ್ಳಿಯಲ್ಲಿ ೧೧ ಜನ ಅಪಘಾತದಲ್ಲಿ ತೀರಿಕೊಂಡರು, ಘಟನೆ ಸಂಬಂಧ ಯಾರನ್ನೇ ಕೇಳಿದರೂ ಪೊಲೀಸ್ ವೈಫಲ್ಯವೆಂದೇ ಹೇಳೋದು. ಪೊಲೀಸ್ ಇಲಾಖೆ ಏನ್ಮಾಡ್ತಿದೆ, ಹೊಟೇಲ್ ಹಾಗೂ ಅಂಗಡಿಗಳಲ್ಲಿ ಎಣ್ಣೆ ಮಾರಾಟ ವ್ಯಾಪಕವಾಗಿದೆ, ಜನ ಸಾಯ್ತಾರೆ, ಜಿಲ್ಲಾಧಿಕಾರಿ ಏನ್ ಮಾಡ್ತಿದ್ದಾರೆ. ಹಾಸನದಲ್ಲಿ ಲ್ಯಾಂಡ್ ಮಾಫಿಯಾದವರ ಜತೆ ಅಧಿಕಾರಿಗಳು ಇದ್ದಾರೆ. ಇದ್ದಕ್ಕೆ ಡಿಸಿ ಕುಮ್ಮಕ್ಕು ಇದೆ, ಇದೆಲ್ಲಾ ದೊಡ್ಡ ಹಗರಣ, ಜಿಲ್ಲೆಯಲ್ಲಿ ಲೂಟಿ ನಡೆಯುತ್ತಿದೆ ಎಂದು ಬೇಸರದಿಂದ ನುಡಿದರು.ದರಕಾಸ್ತ್ ಕಮಿಟಿ ಸಂಬಂಧ ಮೀಟಿಂಗ್ ಕರೆಯಿರಿ ಎಂದರೆ ಕರೆಯಲ್ಲ, ದಾಖಲೆ ಕೊಡಿ ಅಂದ್ರೆ ಕೊಡಲ್ಲಾ, ತಾಲೂಕಿನಲ್ಲಿ ೨೩೯೦೯ ಅರ್ಜಿಗಳು ಬಂದಿದ್ದು, ಇದರಲ್ಲಿ ೬೯೭ ಬಿಟ್ಟು, ಈ ಸರ್ಕಾರದ ನಿಯಮನುಸಾರ ೨೨ ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಡಿಸಿ ವಜಾ ಮಾಡಲಿದ್ದಾರೆ ಮತ್ತು ೩೮೯ ಅರ್ಜಿಗಳು ವಿಎಗಳ ಹತ್ತಿರ ಬಾಕಿ ಇದೆ ಎಂದರು. ವಜಾ ಸಂಬಂಧ ಕಾರಣವೇನೆಂದು ಕೇಳಿದಾಗ ಸ್ಪತ್ತನ್ನು ಅನುಭವಿಸುತ್ತಿದ್ದರೂ ೫೭ ಆಕ್ಟ್‌ನಲ್ಲಿ ಅರ್ಜಿ ಸಲ್ಲಿಸಿರುತ್ತಾರೆ ಅಥವಾ ಕೆರೆ ಒತ್ತುವರಿ ಅಥವಾ ಅರಣ್ಯ ಒತ್ತುವರಿ ಅಥವಾ ಪ್ರಾಣಿಪಕ್ಷಿಗಳಿಗೆ ರಕ್ಷಿತ ಪ್ರದೇಶ ಅಗತ್ಯತೆ ಸೇರಿದಂತೆ ಹಲವು ಕಾರಣಗಳಿದ್ದರೂ, ರೈತರು ಅರ್ಜಿ ಸಲ್ಲಿಸಿ ಒಂದು ವರ್ಷವಾಗಿದ್ದರೂ ಇನ್ನೂ ಮಾಡಿಲ್ಲವೆಂದರು. ಹಳೇಕೋಟೆ ಮತ್ತು ಕಸಬಾ ಹೋಬಳಿ ಅರ್ಜಿಗಳ ಬಗ್ಗೆ ತ್ವರಿತವಾಗಿ ಮಾಹಿತಿ ನೀಡಿ ಮತ್ತು ಒಂದು ತಿಂಗಳಲ್ಲಿ ವಿಧವಾ ಹಾಗೂ ವೃದ್ಧಾಪ್ಯ ವೇತನ, ಪೌತಿ ಮತ್ತು ವಿಭಾಗ ಪತ್ರ ಸಂಬಂಧ ಬಂದ ಅರ್ಜಿಗಳ ವಿಲೇವಾರಿ ಮಾಡಲೇಬೇಕು, ತಗಾದೆ ಅಥವಾ ದಾವೆ ಇದ್ದರೆ ಬೇಡರೀ, ಎಲ್ಲವೂ ಸರಿ ಇದ್ದಾಗ ಮಾಡಿಕೊಡಿ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ೩.೫ ಲಕ್ಷ ಎಕರೆ ಜೋಳ ಸಂಪೂರ್ಣ ನಾಶವಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯಾಧಿಕಾರಿ, ತಹಸೀಲ್ದಾರ್ ಆಗಲೀ ಯಾವುದೇ ಹಳ್ಳಿಗೆ ಭೇಟಿ ಕೊಟ್ಟಿಲ್ಲ. ಪ್ರಾಮಾಣಿಕ ಕಂದಾಯ ಹಾಗೂ ಉಸ್ತುವಾರಿ ಸಚಿವರು ಇದ್ದರೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಸಭೆ ನಡೆಸಿಲ್ಲ. ೬ ತಿಂಗಳಿಂದ ಡೀಮ್ಡ್ ಫಾರೆಸ್ಟ್‌ನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ನೀಡಲು ಇನ್ನೂ ಆಗಿಲ್ಲ, ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ರಸ್ತೆಗಳಲ್ಲಿ ಜೋಳ ಒಣ ಹಾಕುವುದು ಅಥವಾ ಒಕ್ಕಲು ಮಾಡಲು ಬೆಳೆಗಳನ್ನು ಹರಡಿದರೇ ಪಿಡಿಒಗಳ ವಿರುದ್ಧ ಪ್ರಕರಣ ದಾಖಲಿಸಿ, ಎಂದು ತಿಳಿಸಿ, ಪಿಡಿಒಗಳು ಎಚ್ಚರವಹಿಸಬೇಕು ಎಂದು ಎಚ್ಚರಿಸಿದರು.ತಾ.ಪಂ. ಇಒ ಮುನಿರಾಜು, ಜಿಲ್ಲಾ ಪಂಚಾಯತ್ ಎಂಜಿನಿಯರ್ ಸೋಮಶೇಖರ್, ಬಿಸಿಎಂ ಇಲಾಖೆ ಅಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿ ದಿಲೀಪ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಪುರಸಭೆ ಆರೋಗ್ಯಾಧಿಕಾರಿ ವಸಂತ್, ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.
============ ಫೋಟೊ ೧, ಹೊಳೆನರಸೀಪುರದ ತಾಲೂಕು ಕಚೇರಿಯಲ್ಲಿ ಶಾಸಕ ಎಚ್.ಡಿ. ರೇವಣ್ಣ ಸಾಮಾನ್ಯ ಸಭೆ ನಡೆಸಿದರು. ವೈ.ಎಂ.ರೇಣುಮಾರ್, ಮುನಿರಾಜು, ದಿಲೀಪ್, ಸುಮಾ, ಸೋಮಶೇಖರ್ ಇದ್ದರು.