ಕನಕಪುರ: ತಾಲೂಕಿನ ಕಚುವನಹಳ್ಳಿ ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ತೆರೆಯಲು ಸ್ಥಳ ಪರಿಶೀಲನೆ ಮಾಡಿರುವ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮ ಮುಖಂಡ ಕುಮಾರ್ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಮದ್ಯ ವ್ಯಸನಿಗಳ ಕಾಟದಿಂದ ಗ್ರಾಮದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ, ಮದ್ಯದಂಗಡಿ ತೆರೆದರೆ ಗ್ರಾಮದಲ್ಲಿರುವ ಶಾಂತಿ, ನೆಮ್ಮದಿ ಹಾಳಾಗುತ್ತದೆ. ಮುಖ್ಯವಾಗಿ ಯುವಜನತೆ ಮದ್ಯದ ಚಟಕ್ಕೆ ಬಿದ್ದು ಅವರ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಸಂಭವವಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ತಾಲೂಕಿನ ಶಕ್ತಿ ದೇವತೆ ಶ್ರೀ ಕಬ್ಬಾಳಮ್ಮ ದೇವಾಲಯವಿದ್ದು ಇಲ್ಲಿ ಮಂಗಳವಾರ, ಶುಕ್ರವಾರ ಭಾನುವಾರಗಳಂದು ವಿಶೇಷ ಪೂಜೆಗಳು ನಡೆಯಲಿವೆ. ದೂರದೂರುಗಳಿಂದ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ಅಮ್ಮನಿಗೆ ಪ್ರಾಣಿಬಲಿ ಹರಕೆ ತೀರಿಸುತ್ತಾರೆ. ಕಾಬ್ಬಾಳು ದೇವಸ್ಥಾನಕ್ಕೂ ಕಚುವನಹಳ್ಳಿ ಗ್ರಾಮಕ್ಕೆ ಕೂಗಳತೆ ದೂರವಿದ್ದು, ಮದ್ಯದಂಗಡಿ ತೆರೆದರೆ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಸೋಮರಾಜು ಮಾತನಾಡಿ, ಹಣದ ಆಸೆಗಾಗಿ ಅಂಗಡಿಯನ್ನು ಬಾಡಿಗೆಗೆ ನೀಡಿ ಗ್ರಾಮದ ನೆಮ್ಮದಿ ಹಾಳು ಮಾಡಲು ಹೊರಟಿರುವವರನ್ನು ಆರೋಪಿಸಿ, ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಬಿಡುವುದಿಲ್ಲ ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಪುಷ್ಪಾವತಿ, ಸದಸ್ಯೆ ಸುನೀತಾ ರವಿಕುಮಾರ್, ಕೆ ಬಿ ರಾಜು, ಸುಂದರೇಶ್, ಚಂದ್ರು, ಉಮೇಶ್, ಶಿವಬಸವೇಗೌಡ, ಗೌರಮ್ಮ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
ಕನಕಪುರ ತಾಲೂಕಿನ ಕಚುವನಹಳ್ಳಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಕಚುವನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.