ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳ(ಕೆಎಸ್‌ಸಿಸಿಎಫ್)ದಲ್ಲಿ ಸರ್ಕಾರಿ ಆದೇಶಗಳಿಗೆ ಕಿಂಚಿತ್ತೂ ಬೆಲೆಯೇ ಇಲ್ಲ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಆಶಾ ಅವರ ಅಧಿಕಾರಾವಧಿ ಮುಗಿದು ಅವರ ಜಾಗಕ್ಕೆ ಬೇರೊಬ್ಬರು ನಿಯೋಜಿತರಾಗಿದ್ದರೂ ಈವರೆಗೆ ಅಧಿಕಾರ ಹಸ್ತಾಂತರಿಸಿಲ್ಲ. ಇದರ ಜತೆಗೆ, ಸಹಕಾರ ಮಹಾಮಂಡಳದ 34 ಹುದ್ದೆಗಳ ನೇರ ನೇಮಕಾತಿ ನೋಟಿಫಿಕೇಶನ್ ಸಹ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ ಎಂಬುದು ಇದೀಗ ಬೆಳಕಿಗೆ ಬಂದಿದೆ.
ಒಳ ಮೀಸಲಾತಿ ಹಂಚಿಕೆ ಗೊಂದಲದ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್ 28ರಂದು ನಡೆದ ಸಚಿವ ಸಂಪುಟ ಸಭೆಯು ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿಗೆ ಯಾವುದೇ ಅಧಿಸೂಚನೆ ಹೊರಡಿಸಬಾರದು ಎಂದು ನಿರ್ಣಯ ಕೈಗೊಂಡಿತ್ತು. ಈ ಕುರಿತು ನ.25ರಂದು ಸರ್ಕಾರ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಿತ್ತು. ಅ.28ಕ್ಕೂ ಮೊದಲೇ ಅಧಿಸೂಚನೆ ಹೊರಡಿಸಲಾಗಿದ್ದ ನೇಮಕಾತಿ ಮಾಡಲು ಮಾತ್ರ ಅನುಮತಿ ನೀಡಿತ್ತು. ಈ ಆದೇಶ ನಾಲ್ಕು ತಿಂಗಳ ಹಿಂದಿನವರೆಗೂ ಜಾರಿಯಲ್ಲಿತ್ತು.
ಆದರೆ, ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳವು 2025ರ ಆಗಸ್ಟ್ 14ರಂದು ಈ ಸುತ್ತೋಲೆ ಉಲ್ಲಂಘಿಸಿ ನೇರನೇಮಕಾತಿಯ ಅಧಿಸೂಚನೆ ಹೊರಡಿಸಿದೆ. ನೇರ ನೇಮಕಾತಿ ಪ್ರಕ್ರಿಯೆಯನ್ನೂ ನಡೆಸಿದೆ. ಈ ಕುರಿತು ‘ಕನ್ನಡಪ್ರಭ’ವು ಸಹಕಾರ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣ್ಣ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನನಗೆ ಯಾವ ದೂರೂ ಬಂದಿಲ್ಲ. ದೂರು ಬಂದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ. ಮುಖ್ಯಮಂತ್ರಿಗಳು ದೆಹಲಿಯಲ್ಲಿರುವುದರಿಂದ ವ್ಯವಸ್ಥಾಪಕ ನಿರ್ದೇಶಕರ ಅವಧಿ ವಿಸ್ತರಣೆ ಫೈಲ್ ಕ್ಲಿಯರ್ ಆಗಿಲ್ಲ. ಅವಧಿ ಮುಗಿದ ಮೇಲೂ ಮುಂದುವರೆಯುವುದು ಅಕ್ರಮ ಆಗುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಗೊತ್ತಿರಲಿಲ್ಲ:
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಜಿ.ಪಿ.ಪಾಟೀಲ್ ಅವರನ್ನು ಸಂಪರ್ಕಿಸಿದಾಗ, ಈಗಿರುವ ಎಂಡಿ ಅವರನ್ನು ಮುಂದುವರೆಸಲು ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಣಯ ಮಾಡಿದ್ದೆವು. ಜುಲೈಗೆ ಮುಗಿಯಲಿದೆ ಅಂತ ಅಷ್ಟೇ ಗೊತ್ತಿತ್ತು, ದಿನಾಂಕ ಗೊತ್ತಿರಲಿಲ್ಲ. ಪ್ರಭಾರಿ ಅಧಿಕಾರಿ ನೇಮಕದ ಬಗ್ಗೆ ಗೊತ್ತಿಲ್ಲ. ಪ್ರಭಾರಿ ಅಧಿಕಾರಿ ನೇಮಿಸಲಾಗಿದೆ ಎಂದು ಕಾರ್ಯದರ್ಶಿಯವರಾಗಲಿ, ಇತರ ಅಧಿಕಾರಿಗಳಾಗಲಿ ನನ್ನ ಗಮನಕ್ಕೆ ತಂದಿಲ್ಲ. ಒಂದೋ ಹೊಸ ಅಧಿಕಾರಿ ಬರಬೇಕು, ಇಲ್ಲಾ ಇವರ ವಿಸ್ತರಣೆಯಾಗಬೇಕು. ಅಲ್ಲಿಯವರೆಗೆ ನೇರ ನೇಮಕಾತಿ ಪ್ರಕ್ರಿಯೆ ಮುಂದುವರೆಸುವುದಿಲ್ಲ ಎಂದು ಸ್ಪಷ್ಟಡಿಸಿದರು.
ಏನಿದು ಆರೋಪ?
- ಒಳಮೀಸಲು ಹಂಚಿಕೆ ಗೊಂದಲ ಹಿನ್ನೆಲೆಯಲ್ಲಿ ನೇರ ನೇಮಕಾತಿಗೆ ಬ್ರೇಕ್ ಹಾಕಿದ್ದ ಸರ್ಕಾರ
- ಈ ಸಂಬಂಧ ಎಲ್ಲ ಇಲಾಖೆಗಳಿಗೂ 2024ರ ನ.25ರಂದು ರಾಜ್ಯ ಸರ್ಕಾರದಿಂದ ಸುತ್ತೋಲೆ
- ಆದರೂ 2025ರ ಆ.14ರಂದು ನೇರ ನೇಮಕಾತಿಗೆ ಸಹಕಾರ ಗ್ರಾಹಕ ಮಂಡಳ ಅಧಿಸೂಚನೆ
- ಸರ್ಕಾರದ ಆದೇಶಕ್ಕೂ ರಾಜ್ಯ ಸಹಕಾರ ಗ್ರಾಹಕ ಮಾರಾಟ ಮಹಾಮಂಡಳ ಬೆಲೆ ಕೊಟ್ಟಿಲ್ಲ
- ಅಧಿಕಾರಾವಧಿ ಮುಗಿದರೂ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರವಾಗಿಲ್ಲ ಮಂಡಳದ ಎಂಡಿ
