ಹುಬ್ಬಳ್ಳಿ: "ಪುಷ್ಪಾ " ಚಿತ್ರದ ಮಾದರಿಯಲ್ಲಿ ನಕಲಿ ಮದ್ಯ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ, ಬರೋಬ್ಬರಿ ₹ 50 ಲಕ್ಷ ಮೌಲ್ಯದ ನಕಲಿ ಮದ್ಯ ವಶಪಡಿಸಿಕೊಂಡಿದೆ.
ಆಗಿದ್ದೇನು?
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡವೂ ಧಾರವಾಡದ ನರೇಂದ್ರ ಟೋಲ್ ಗೇಟ್ ಬಳಿ ಕಳೆದ ಗುರುವಾರ ವಾಹನಗಳ ಬಿಲ್ ತಪಾಸಣೆ ಮಾಡುತ್ತಿತ್ತು. ಈ ವೇಳೆ ನಾಗಲ್ಯಾಂಡ್ ನೋಂದಣಿ ಸಂಖ್ಯೆ (ಅದೂ ನಕಲಿ) ಹೊಂದಿರುವ ಟ್ಯಾಂಕರ್ ಪರಿಶೀಲನೆ ನಡೆಸಲಾಗುತ್ತಿತ್ತು. ವೇಸ್ಟ್ ಆಯಿಲ್ ಇದೆ ಎಂದು ರಾಜಸ್ಥಾನ ಮೂಲದ ಮೋಹನಲಾಲ್ ಎಂಬ ಚಾಲಕ ಬಿಲ್ ತೋರಿಸಿದ್ದಾನೆ. 3 ಸಾವಿರ ಲೀಟರ್ ಬಿಲ್ ತೋರಿಸಿದ್ದಾನೆ. ಆದರೆ ಟ್ಯಾಂಕರ್ 20 ಸಾವಿರ ಲೀಟರ್‌ದ್ದು. ಹೀಗಾಗಿ ಸಂಶಯ ಬಂದು ಚಾಲಕನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಆತ ಅಲ್ಲಿಂದ ಓಡಿ ಪರಾರಿಯಾಗಿದ್ದಾನೆ.ಬೇರೆ ಚಾಲಕನನ್ನು ಕರೆಯಿಸಿ ಟ್ಯಾಂಕರ್‌ನ್ನು ನವನಗರದಲ್ಲಿರುವ ಕಚೇರಿಗೆ ತೆಗೆದುಕೊಂಡು ಬರಲಾಗಿದೆ. ಮೂರು ದಿನವಾದರೂ ಯಾರೊಬ್ಬರು ವಾರಸುದಾರರು ಬಂದಿಲ್ಲ. ಮಂಗಳವಾರದವರೆಗೂ ಟ್ಯಾಂಕರ್‌ನಲ್ಲಿ ವೇಸ್ಟ್ ಆಯಿಲೇ ಇರಬಹುದೆಂದು ಅಧಿಕಾರಿಗಳು ತಿಳಿದಿದ್ದರು.
ನಕಲಿ ಮದ್ಯ
ಈ ಮದ್ಯ ಗೋವಾ ಮೂಲದ್ದು ಎಂದು ಲೇಬಲ್ ಇದೆ. ಆದರೆ ಲೇಬಲ್ ಕೂಡ ನಕಲಿಯೇ ಆಗಿದೆ. ಹೀಗಾಗಿ ಕರ್ನಾಟಕದಲ್ಲೇ ಮದ್ಯ ತಯಾರಿಸಿ ಅದಕ್ಕೆ ನಕಲಿ ಲೇಬಲ್ ಅಂಟಿಸಿ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ವಾಹನದ ನಂಬರ್ ಪ್ಲೇಟ್, ಬಿಲ್, ಮದ್ಯ ಎಲ್ಲವೂ ನಕಲಿ ಆಗಿದೆ. ಬೆಂಗಳೂರಿನ ಸೋಮಾನಿ ಟ್ರೇಡರ್ಸ್ ಹೆಸರಲ್ಲಿ ನಕಲಿ ಬಿಲ್. ರಾಜಸ್ಥಾನದ ನಿಶಾಂತ ಲುಬ್ರಿಕೆಂಟ್ಸ್‌ಗೆ ಸಾಗಾಟ ಹೆಸರಲ್ಲಿ ಬಿಲ್ ಇರುವುದು ಪತ್ತೆಯಾಗಿದೆ. ಈ ಬಗ್ಗೆಯೂ ಇದೀಗ ತನಿಖೆ ನಡೆದಿದೆ.
ಹಸ್ತಾಂತರ
ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಸಹಾಯಕ ಆಯುಕ್ತ ವಿಜಯಕುಮಾರ ಸನದಿ, ಇನ್ಸಪೆಕ್ಟರ್ ವಿಜಯಕುಮಾರ ತಿರುಮಲೆ ಸೇರಿದಂತೆ ಹಲವರು ಈ ಟ್ಯಾಂಕರ್‌ನ್ನು ಪತ್ತೆ ಹಚ್ಚಿದ್ದರು. ವಾಣಿಜ್ಯ ತೆರಿಗೆ ಇಲಾಖೆ (ಜಾರಿ) ಜಂಟಿ ಆಯಕ್ತ ರವಿಕುಮಾರ, ಉಪ ಆಯುಕ್ತ ಬಾಳಪ್ಪ ಸಂಪಗಾಂವ ಸೇರಿದಂತೆ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.