ಕನ್ನಡಪ್ರಭ ವಾರ್ತೆ ಸೊರಬ/ ಸಾಗರ
ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ಭಾರತ ಗೆಲ್ಲಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್. ಹಾಲಪ್ಪ ಹೇಳಿದರು.ಶುಕ್ರವಾರ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವವನ್ನು ಕೊಂಡಾಡುತ್ತಿದೆ. ಆದ್ದರಿಂದ ನಾವು ಚಲಾಯಿಸುವ ಪ್ರತಿಯೊಂದು ಮತವೂ ದೇಶದ ಗೆಲುವಿಗಾಗಿ ಎನ್ನುವುದನ್ನು ಮತದಾರರು ಮರೆಯಬಾರದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ನಾನು ಬಂಗಾರಪ್ಪ ಅವರ ಮಗಳು, ರಾಜಕುಮಾರ್ ಅವರ ಸೊಸೆ ಎಂದು ಮತ ಕೇಳುವ ಬದಲು ಸಮಾಜಕ್ಕೆ ತಾವು ನೀಡಿದ ಕೊಡುಗೆ ಗಳ ಪಟ್ಟಿ ನೀಡಿ ಅದರ ಆಧಾರದ ಮೇಲೆ ಮತ ಯಾಚಿಸಲಿ ಎಂದ ಅವರು, ಯಾವುದೇ ಭಾವನಾತ್ಮಕ ಸಂಬಂಧಗಳಿಗೆ ಮಣೆ ಹಾಕದೇ ಮತ್ತು ಜಾತಿ-ಮತಬೇಧ ಇಲ್ಲದೇ ಬಿಜೆಪಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ ಅವರು, ಕಾಂಗ್ರೆಸ್‌ನಲ್ಲಿ ಪ್ರಧಾನಿ ಯಾರು ಎನ್ನುವ ಸ್ಪಷ್ಟತೆಯೇ ಇಲ್ಲ. ಬಿಜೆಪಿ ೪೦೦ಕ್ಕಿಂತಲೂ ಅಧಿಕ ಸ್ಥಾನಗಳು ಲಭ್ಯವಾಗಿದ್ದು, ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ೩ ಲಕ್ಷ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.ಮೇ ೪ರ ಸಂಜೆ ೫ ಗಂಟೆಗೆ ಸೊರಬ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ನೇತೃತ್ವದಲ್ಲಿ ಬಹಿರಂಗ ಸಭೆ ಹಮ್ಮಿ ಕೊಳ್ಳಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಭ್ಯರ್ಥಿ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ವಿ.ಎಸ್.ಅರುಣ್ ಸೇರಿದಂತೆ ಜಿಲ್ಲೆ ಮತ್ತು ತಾಲೂಕು ಮುಖಂಡರು, ವಿವಿಧ ಶಕ್ತಿ ಕೇಂದ್ರಗಳ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಓಟೂರು ಬಸವರಾಜ್, ಅಶೋಕ್ ಶೇಟ್, ಜಯಶೀಲಗೌಡ್ರು ಮಾಗಡಿ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕೃಷ್ಣಮೂರ್ತಿ ಕೊಡಕಣಿ, ಷಡಕ್ಷರಿ, ಚನ್ನಬಸಪ್ಪ, ಮಹಾಬಲೇಶ್ವರ ಮನೆಘಟ್ಟ, ಯುವ ಮೋರ್ಚಾ ಮುಖಂಡರಾದ ಸಂಜಯ್, ಹರೀಶ್, ಶಶಿ ಇದ್ದರು.ನಾವೆಲ್ಲ ಸೇರಿ ರಾಷ್ಟ್ರ ಗೆಲ್ಲಿಸಬೇಕು: ಸಾಗರದಲ್ಲಿ ಹಾಲಪ್ಪ ಕರೆ
ಸಾಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಷ್ಟçವನ್ನು ಗೆಲ್ಲಿಸಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಹೇಳಿದರು.
ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಗುರುವಾರ ಸಂಜೆ ಪಾದಯಾತ್ರೆಯ ಮೂಲಕ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಮತಯಾಚಿಸಿ ಮಾತನಾಡಿದ ಅವರು, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.ಮಲೆನಾಡಿನ ಜನ ಬುದ್ದಿವಂತರಿದ್ದು ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ಓಟ್ ಮಾಡಿ ಬಂದವರಿಗೆ ಜನ ಮತ ಹಾಕುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಹಾಲಪ್ಪನವರು, ಈ ಬಾರಿ ಬಿ.ವೈ.ರಾಘವೇಂದ್ರ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.ಕಾಂಗ್ರೇಸ್ ಪಕ್ಷ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿಲ್ಲ. ನಾವು ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನ ಮಂತ್ರಿಯನ್ನಾಗಿಸಲು ಮತ ಕೊಡಿ ಎಂದು ಕೇಳುತ್ತಿದ್ದೇವೆ. ಕಾಂಗ್ರೇಸ್ನವರಿಗೆ ತಮ್ಮ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದೆ ಗೊತ್ತಿಲ್ಲ. ಜೊತೆಗೆ ಕಾಂಗ್ರೇಸ್ನವರ ಗ್ಯಾರಂಟಿಯನ್ನು ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ದೇಶಕ್ಕೆ ಮೋದಿಯೆ ಗ್ಯಾರಂಟಿಯಾಗಿದ್ದು, ಭಾರತವನ್ನು ವಿಶ್ವಗುರುವಾಗಿಸುವ, ವಿಶ್ವದ ಪ್ರಬಲ ರಾಷ್ಟçವಾಗಿಸುವ ಶಕ್ತಿ ನರೇಂದ್ರ ಮೋದಿಯವರಿಗಿದೆ ಎಂದರು.