ಪರಿಶಿಷ್ಟರ ಕುಂದುಕೊರತೆ ಆಲಿಸಿ ಸಮಸ್ಯೆಗಳ ಪರಿಹರಿಸಿ

KannadaprabhaNewsNetwork |  
Published : May 23, 2026, 01:45 AM IST
ಕ್ಯಾಪ್ಷನ16ಕೆಡಿವಿಜಿ39 ದಾವಣಗೆರೆಯಲ್ಲಿ ಜಿಲ್ಲಾ  ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆಗಳ ಬಗ್ಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಎಸ್‌ಪಿ ಎಚ್.ಟಿ.ಶೇಖರ್ ಸೂಚನೆ । ಕುಂದುಕೊರತೆ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದುಕೊರತೆಗಳ ಬಗ್ಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.

ಸಾರ್ವಜನಿಕರು ಸಿಗ್ನಲ್‌ಗಳಲ್ಲಿ ಯಾರೂ ಪೊಲೀಸ್ ಇಲ್ಲವೆಂದು ಸಿಗ್ನಲ್ ಜಂಪ್ ಮಾಡಿದರೆ ಅದು ನಿಮ್ಮ ಬೇಜವಾಬ್ದಾರಿ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸುಮಾರು ₹33 ಕೋಟಿಗಳ ದಂಡದ ನೋಟಿಸ್ ಜಾರಿಯಾಗಿರುತ್ತದೆ ಎಂದರು.

ಪರಿಶಿಷ್ಟರ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಭೂಮಿ ಕೊರತೆ, ಸ್ಮಶಾನಕ್ಕೆ ಮೂಲಸೌಲಭ್ಯಗಳ ಕೊರತೆ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಹೀಗೆ ಅನೇಕ ಸಮಸ್ಯೆಗಳಿವೆ ಎಂದು ದಲಿತ ಮುಖಂಡರು ಸಭೆಗೆ ತಿಳಿಸಿದರು.

ಹೊನ್ನಾಳಿ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡುತ್ತಿದ್ದಾರೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಚನ್ನಗಿರಿಯ ಹಟ್ಟಿ ಗ್ರಾಮದಲ್ಲಿರುವ ಎ.ಕೆ. ಕಾಲೋನಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ ಎಂಬ ದೂರು ಸಲ್ಲಿಸಲಾಯಿತು. ಕಂಸಾಗರದಲ್ಲಿ ಸ್ಮಶಾನ ಜಾಗವನ್ನು ನೀಡುವಂತೆ ಕೋರಲಾಯಿತು.

ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಕರು ಮಕ್ಕಳಿಗೆ ಬೇಕಾಬಿಟ್ಟಿ ಪಾಠ ಕಲಿಸಿಕೊಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಅತಿ ಹೆಚ್ಚು ಅಂಕವನ್ನು ಪಡೆದಿರುವುದು ನಮ್ಮ ಸರ್ಕಾರಿ ಶಾಲೆಗಳು ಎಂದು ಬಹಳ ಹೆಮ್ಮೆಯಿಂದ ಹೇಳಿದರು.

ಸೂಳೆಕೆರೆ ಬಳಿ ಇನ್ನೂ ಅತಿ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಖಾಸಗಿ ಶಾಲೆಗಳಲ್ಲಿ ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಹರಿಹರ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಔಷಧಿ ನೀಡುತ್ತಿಲ್ಲವೆಂದು ಪ್ರಸ್ತಾಪಿಸಲಾಯಿತು. ಹರಿಹರದ ಗುರು ಭವನದಲ್ಲಿರುವ ಅಂಬೇಡ್ಕರ್ ಪುತ್ಥಳಿ ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಯಿತು. ಹರಿಹರದ ರೈಲ್ವೆ ಬ್ರಿಡ್ಜ್‌ ಹತ್ತಿರ ಇರುವ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಹೇಳಿದರು. ಆಶ್ರಯ ಕಾಲೋನಿಯಲ್ಲಿ 150 ಮನೆಗಳಿದ್ದು, ಅವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಲಾಯಿತು.

ಮಾಯಕೊಂಡದ ಹತ್ತಿರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲೈಸೆನ್ಸ್ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಕೂಡಲೇ ಅಬಕಾರಿ ಇಲಾಖೆಯವರು ಕ್ರಮ ಕೈಗೊಳುವಂತೆ ಮನವಿ ಮಾಡಿದರು. ಮಲೇಬೆನ್ನೂರಿನಲ್ಲಿ ಮಟ್ಕಾ, ಜೂಜು ಇನ್ನೂ ಅನೇಕ ರೀತಿ ಅಕ್ರಮ ದಂಧೆಗಳು ನಡೆಯುತ್ತಿದೆ ಎಂದು ಸಹ ದೂರಲಾಯಿತು.

ಪಿಎಸ್‌ಐ ಕಳೆದ ಬಾರಿ ಮಂಡಿಸಿರುವ ಅನುಪಾಲನ ವರದಿಯನ್ನು ಸಭೆಗೆ ಮಂಡಿಸಿದರು. ಡಿವೈಎಸ್‌ಪಿ ಶರಣಬಸವೇಶ್ವರ ಪ್ರಾಸ್ತವಿಕವಾಗಿ ಮಾತನಾಡಿದರು. ಡಿವೈಎಸ್‌ಪಿ ಬಸವರಾಜ್, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

- - -

-16ಕೆಡಿವಿಜಿ39:

ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎಚ್.ಟಿ.ಶೇಖರ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಬೀಜ, ಗೊಬ್ಬರ ಮಾರಾಟ ಮಾಡಿದರೆ ಕಾನೂನು ಕ್ರಮ: ಡಿಸಿ
ಧಾರವಾಡ ಪ್ರತ್ಯೇಕ ಪಾಲಿಕೆಗೆ 7 ದಿನದ ಗಡುವು!