ಹೂವಿನಹಡಗಲಿ: ಮನುಷ್ಯ ಹೊರಗಿನ ಸಂಪತ್ತಿನಲ್ಲಿ ನೆಮ್ಮದಿ ಹುಡುಕಿದರೆ ಸಿಗುವುದಿಲ್ಲ. ಬದುಕಿನ ಬದಲಾವಣೆಗೆ ಶರಣ, ಸಂತರ ಪ್ರವಚನಗಳನ್ನು ಆಲಿಸುವುದರಿಂದ ನೆಮ್ಮದಿ ಶಾಂತಿ ಸಿಗಲು ಸಾಧ್ಯವಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಜೀವನದಲ್ಲಿ ಸಜ್ಜನರ ಸಂಘ ಮಾಡುವ ಜತೆಗೆ ಗುರುವಿನ ಮಾರ್ಗದರ್ಶನ ಬೇಕು. ಅಜ್ಞಾನವನ್ನು ಕಳೆದು ಸುಜ್ಞಾನದ ಬೆಳಕನ್ನು ಚೆಲ್ಲುವ ಶಕ್ತಿ ಪ್ರವಚನಕ್ಕೆ ಇದೆ ಎಂದರು.
ಸಾಮಾಜಿಕ ಜಾಲತಾಣ ಹಾಗೂ ಆಧುನಿಕ ಜೀವನ ಶೈಲಿ ಬೆನ್ನು ಹತ್ತಿ, ಬಹಳಷ್ಟು ಯುವಕರು ಸಾಮಾಜಿಕ ಚಿಂತನೆಗಳಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮುಂದಿಟ್ಟುಕೊಂಡು ಯುವಕರು ಮುನ್ನಡೆಯಬೇಕು ಎಂದರು.ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿ ಮಾಡಿದಾಗ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಆ ವ್ಯಕ್ತಿ ಬದುಕುತ್ತಾನೆ ಎಂದರು.
ಇದಕ್ಕೂ ಮುನ್ನ ಸಕಲ ಮಂಗಳ ವಾದ್ಯಗಳೊಂದಿಗೆ ಶ್ರೀಗಳ ಮೆರವಣಿಗೆ ಜರುಗಿತು. ಮಲ್ಲಿಕಾರ್ಜುನ ವಿರಕ್ತ ಮಠದ ಅಕ್ಕನ ಬಳಗ ಮಹಿಳೆಯರು ಆರುತಿ ಹಿಡಿದು ಮೆರವಣಿಗೆಗೆ ಮೆರಗು ತಂದರು.
ಟ್ರಸ್ಟ್ ಅಧ್ಯಕ್ಷ ಅಜಯ್ ಪೂಜಾರ್ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.