ಬಳ್ಳಾರಿ: ಪರಿಸರ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಬಾಲ್ಯದಲ್ಲಿಯೇ ಆಗಬೇಕು ಎಂದು ಪಾಲ್ತೂರು ಮಠದ ಶ್ರೀಚನ್ನವೀರಶಾಂತ ಶಿವಾಚಾರ್ಯರು ಹೇಳಿದರು.
ಮನುಷ್ಯ ಬರೀ ವಿದ್ಯೆ ಕಲಿತು, ಬದುಕು ರೂಪಿಸಿಕೊಂಡರೆ ಸಾಲದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಭಗವಂತ ನೀಡಿದ ಪ್ರಕೃತಿಯನ್ನು ರಕ್ಷಿಸುವ ಬದಲು ನಾಶ ಮಾಡುತ್ತಿದ್ದಾನೆ. ಇದರಿಂದ ಮನುಷ್ಯ ಜೀವನ ಅವನತಿಯತ್ತ ಸಾಗುತ್ತಿದೆ. ಇದನ್ನು ತಪ್ಪಿಸಲು ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಬೇಕು. ಮರಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.
ಅಕ್ಷರಾಭ್ಯಾಸಕ್ಕೆ ಅತ್ಯಂತ ಪ್ರಾಚೀನ ಹಿನ್ನಲೆಯಿದೆ. ಗುರುಕುಲ ಪದ್ಧತಿಯಲ್ಲೂ ಈ ಪದ್ಧತಿಯಿತ್ತು. ಅದನ್ನು ಮುಂದುವರಿಸಿಕೊಂಡು ಹೊಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಮಕ್ಕಳಿಗೆ ಬಾಲ್ಯದಲ್ಲಿಯೇ ಅಕ್ಷರ ಸಂಸ್ಕಾರ ನೀಡುವ ಮೂಲಕ ಅವರನ್ನು ಅಕ್ಷರದ ಅಕ್ಷಯವನ್ನಾಗಿ ಮಾಡುವುದೇ ಅಕ್ಷರಾಭ್ಯಾಸದ ಮೂಲ ಆಶಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೆಕ್ಕ ಪರಿಶೋಧಕ ಹಾಗೂ ಪರಿಸರ ಪ್ರೇಮಿ ಸಿದ್ಧರಾಮೇಶ್ವರಗೌಡ ಕರೂರು, ಪರಿಸರ ರಕ್ಷಣೆಯಿಂದಾಗುವ ಅನುಕೂಲಗಳು, ಮರಗಿಡಗಳನ್ನು ನೆಟ್ಟು ಪೋಷಿಸುವುದರಿಂದಾಗುವ ಪ್ರಯೋಜನಗಳು ಕುರಿತು ತಿಳಿಸಿದರು.
ಶಾಲೆಯ ಮುಖ್ಯಗುರು ಎನ್.ಭಾರತಿ, ಶಾಲೆಯ ಶಿಕ್ಷಕಿಯರಾದ ಮಂಜುಳಾ, ರೂಪಾ, ವಿಶಾಲಾಕ್ಷಿ, ಮುನಿಸ್ವಾಮಿ, ಪ್ರೀತಿ, ಪುಷ್ಪಾವತಿ ಇದ್ದರು. ಶಿಕ್ಷಕಿಯರಾದ ಪಲ್ಲವಿ, ಭವಾನಿ, ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.