ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಯಾವುದೇ ಸಮುದಾಯದ ವೃತ್ತಿ, ಸಂಸ್ಕಾರ, ಸಂಸ್ಕೃತಿ ಉಳಿವಿಗೆ ಸಂಘಟನೆ ಅವಶ್ಯಕವಾಗಿದೆ ಎಂದು ನ್ಯಾಯವಾದಿ ಕೆ.ಪಿ.ಸುರೇಶ್ ಕುಮಾರ್ ಹೇಳಿದರು.ಭಾನುವಾರ ಪಟ್ಟಣದ ಲಕ್ಷ್ಮೀಹಾರ್ಡ್ ವೇರ್ ಮಳಿಗೆ ಮೇಲ್ಭಾಗದ ಕಟ್ಟದಲ್ಲಿ ನಡೆದ ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಹಿಂದೆ ಸತ್ಯ, ಧರ್ಮ ಮುಖ್ಯವಾಗಿತ್ತು. ಪ್ರಸ್ತುತ ದಿನಗಳಲ್ಲಿ ಸಮುದಾಯದ ಉಳಿವಿಗೆ ಸಂಘಟನೆ ಅವಶ್ಯಕವಾಗಿದೆ. ಭಾವಸಾರ ಕ್ಷತ್ರಿಯ ಸಮಾಜದವರು ಮೂಲತಃ ಕ್ಷತ್ರಿಯ ಸಮುದಾಯಕ್ಕೆ ಸೇರಿದ್ದರು. ಧರ್ಮದ ಮತ್ತು ರಾಷ್ಟ್ರದ ಉಳಿವಿಗೆ ಹೋರಾಟ ಮಾಡಿದವರು. ಪಾಕಿಸ್ತಾನದ ಕಜಕಿ ಸ್ಥಾನದಲ್ಲಿರುವ ಹಿಂಗುಲಾಂಬಿಕೆ ದೇವಿ ಈ ಸಮುದಾಯದ ಕುಲದೇವತೆಯಾಗಿದ್ದು ಇತಿಹಾಸದಲ್ಲಿ ತಿಳಿದು ಬರುವಂತೆ ಪರಶುರಾಮ ವಿಷ್ಣುವಿನ ಅವತಾರ ತಾಳಿ ಕ್ಷತ್ರಿಯ ಸಮುದಾಯವನ್ನು ನಾಶ ಮಾಡಲು ಹೋರಟಾಗ ಕ್ಷತ್ರಿಯ ಸಮಾಜದ ಗುಜರಾತ್ ನಲ್ಲಿದ್ದ ಸರಸಿಂಹ ಮತ್ತು ಭಾವ ಸಿಂಹ ಹಿಂಗುಲಾಂಬಿಕೆ ದೇವಿಗೆ ಮೊರೆ ಹೋದಾಗ ದೇವಿ ಈ ಪಂಗಡದ ಸಮುದಾಯದ ರಕ್ಷಣೆ ಮಾಡಿದ್ದರು. ಇವರಿಂದ ಭಾವಸಾರ ಕ್ಷತ್ರಿಯ ಎಂಬ ಹೆಸರು ಸಮುದಾಯಕ್ಕೆ ಬಂದಿತು ಎಂದರು. ಮೂಲತಃ ಗುಜರಾತ್ ನಲ್ಲಿದ್ದ ಈ ಸಮುದಾಯವರು ವಿದೇಶಿಯರ ದಾಳಿಯಿಂದ ತಮ್ಮ ಧರ್ಮ ಉಳಿಸಿಕೊಳ್ಳಲು ಮಧ್ಯ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತಿತರ ಪ್ರದೇಶಗಳಿಗೆ ವಲಸೆ ಬಂದರು ಎಂದರು.
ಸಮುದಾಯದವರು ತಮ್ಮ ಸಮಾಜದ ಇತಿಹಾಸ, ಭಾಷೆ, ಸಂಸ್ಕೃತಿ ಬಗ್ಗೆ ಯುವ ಪೀಳಿಗೆಗೆ ತಿಳಿಸಿ ಅವುಗಳನ್ನು ಉಳಿಸುವ ಕೆಲಸ ಮಾಡಬೇಕು. ಇತಿಹಾಸ ಮರೆತರೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸಮುದಾಯವರು ನಿರ್ಮಿಸಲು ಉದ್ದೇಶಿರುವ ಸಮುದಾಯ ಭವನ ಮತ್ತು ದೇವಸ್ಥಾನದ ನಿರ್ಮಾಣದಲ್ಲಿ ಎಲ್ಲರೂ ಬದ್ಧತೆಯಿಂದ ತೊಡಗಿಸಿ ಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವೆಂಕಟೇಶ್ ದೋಯಿ ಜೋಡೆ ಮಾತನಾಡಿ, ಸಂಘದ ಎಲ್ಲಾ ಪದಾಧಿಕಾರಿಗಳ ಮತ್ತು ಸದಸ್ಯರ ಸಹಕಾರ ದಿಂದ ಸಂಘಕ್ಕೆ ಸ್ವಂತ ನಿವೇಶನ ಖರೀದಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನ ಮತ್ತು ದೇವಸ್ಥಾನ ನಿರ್ಮಿಸಲಾಗುವುದು. ಎಲ್ಲರೂ ಹೆಚ್ಚಿನ ಸಹಕಾರ ನೀಡಬೇಕು ಎಂದರು. ಸಮಾಜದ ಕಾರ್ಯದರ್ಶಿ ಜಿ.ಆರ್. ಜ್ಞಾನೇಶ್ ವಾರ್ಷಿಕ ವರದಿ ವಾಚಿಸಿದರು ಹಾಗೂ ಮುಂದಿನ ದಿನಗಳಲ್ಲಿ ಸಮಾಜದಿಂದ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಗೋಪಾಲರಾವ್, ಖಜಾಂಚಿ ಡಿ.ಜಿ.ಶ್ರೀನಿವಾಸ್, ಭಾವಸಾರ ಕ್ಷತ್ರಿಯ ಮಹಿಳಾ ಸಮಾಜ ಅಧ್ಯಕ್ಷೆ ಮಮತಾ ನಾಗರಾಜ್, ರಶ್ಮಿ, ಹಿಂಗುಲಾಂಬಿಕಾ ಸಂಘದ ನಯನ, ಸರಸ್ಪತಿ, ಪ್ರಶಾಂತ್ ಪಾಲ್ಗೊಂಡಿದ್ದರು. ಗೋಪಾಲ್ ರಾವ್ ಕಾಕಡೆ ಅವರ ಸ್ಮರಣಾರ್ಥ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೋಷನ್, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಜಯಕಿಶನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.