ಬೆಂಗಳೂರಿನಲ್ಲಿ ಸಚಿವ ಜಮೀರ್ ಅಧ್ಯಕ್ಷತೆಯಲ್ಲಿ ಸಭೆ
ಜು. 10ರ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಬಳ್ಳಾರಿಗೆ; ಸಮ್ಮೇಳನ ಜಾಗ ಗುರುತಿಸುವಿಕೆಬಳ್ಳಾರಿ ವಿವಿ ಬಳಿಯ ಜಾಗದಲ್ಲಿ ಸಮ್ಮೇಳನ ನಡೆಸುವ ಸಾಧ್ಯತೆ
ಕನ್ನಡಪ್ರಭ ವಾರ್ತೆ ಬಳ್ಳಾರಿಗಣಿನಗರಿ ಬಳ್ಳಾರಿಯಲ್ಲಿ ಡಿಸೆಂಬರ್‌ನಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಘೋಷಣೆ ಬೆನ್ನಲ್ಲೇ ಸಾಹಿತ್ಯ ಸಮ್ಮೇಳನ ಯಶಸ್ವಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮುಖದಲ್ಲಿ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಂಗಳವಾರ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಸಮ್ಮೇಳನ ಅಧ್ಯಕ್ಷರ ಘೋಷಣೆ ಸೇರಿದಂತೆ ಈವರೆಗೆ ಸಮ್ಮೇಳನ ನೆಲೆಯಲ್ಲಿ ಕೈಗೊಂಡಿರುವ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರಲ್ಲದೆ, ಬಹಳ ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಬಂದಿದ್ದು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕಾಗಿದೆ. ಹಿರಿಯ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಜ್ಯ ಸರ್ಕಾರ ₹40 ಕೋಟಿ ಅನುದಾನ ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.ಸಭೆಯಲ್ಲಿ ಭಾಗವಹಿಸಿದ್ದ ಬಳ್ಳಾರಿ ಸಚಿವ ಜಮೀರ್ ಅಹ್ಮದ್, ಸಮ್ಮೇಳನ ಯಶಸ್ವಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬಳ್ಳಾರಿಯಲ್ಲಿ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲಾಗುವುದು. ಸರ್ಕಾರ ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದ್ದಾರಲ್ಲದೆ, ಜು. 10ರ ಬಳಿಕ ಬಳ್ಳಾರಿಗೆ ಆಗಮಿಸುವೆ. ಸಮ್ಮೇಳನದ ಜಾಗ ಗುರುತಿಸುವುದು ಸೇರಿದಂತೆ ಅಗತ್ಯ ಸಿದ್ಧತೆಗಳ ಕುರಿತು ಸಭೆ ನಡೆಸೋಣ ಎಂದು ಸಭೆಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಕೇಂದ್ರ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಜರುಗುವ ಸಮ್ಮೇಳನ ಕುರಿತು ಚರ್ಚಿಸುವ ಸಭೆಗೆ ಕಸಾಪ ಜಿಲ್ಲಾಧ್ಯಕ್ಷರನ್ನು ಕರೆಯದಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.ಬಳ್ಳಾರಿ ವಿವಿ ಬಳಿ ಸಮ್ಮೇಳನ ಸಾಧ್ಯತೆ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ವಿಶ್ವವಿದ್ಯಾಲಯದ ಬಳಿ ಜರುಗುವುದು ಬಹುತೇಕ ಖಚಿತವಾಗಿದೆ. ಸಮ್ಮೇಳನ ಸಂಬಂಧ ಬಳ್ಳಾರಿಯಲ್ಲಿ ಮೂರು ಜಾಗಗಳನ್ನು ಗುರುತಿಸಲಾಗಿದೆಯಾದರೂ ವಾಹನಗಳ ಪಾರ್ಕಿಂಗ್ ಹಾಗೂ ಸುಗಮ ಸಂಚಾರ ದೃಷ್ಟಿಯಿಂದ ಬಳ್ಳಾರಿ ವಿವಿ ಬಳಿಯ 120 ಎಕರೆ ಪ್ರದೇಶದಲ್ಲಿ ಸಮ್ಮೇಳನ ನಡೆಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಸಾಹಿತ್ಯ ಪರಿಷತ್ ಬಂದಿದ್ದು, ಜಿಲ್ಲಾ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಂತಿಮಗೊಳಿಸುವ ಸಾಧ್ಯತೆಯಿದೆ. ಸಮ್ಮೇಳನ ಯಶಸ್ವಿ ಕೋರಿ ಜಿಲ್ಲಾ ಸಾಹಿತ್ಯ ಪರಿಷತ್ ಶೀಘ್ರದಲ್ಲಿ ಬಳ್ಳಾರಿಯಲ್ಲಿ ಸರ್ವಧರ್ಮ ಗುರುಗಳ ಸಭೆ ಕರೆದು ಚರ್ಚಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಂಘ-ಸಂಸ್ಥೆಗಳ ಮುಖಂಡರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ, ಸಮ್ಮೇಳನ ಯಶಸ್ವಿಗೆ ಕೋರಲಾಗಿದ್ದು ಎಲ್ಲ ಸಮುದಾಯಗಳ ಧರ್ಮಗುರುಗಳು ಹಾಗೂ ಮುಖಂಡರ ಜೊತೆ ಚರ್ಚಿಸಲು ಕಸಾಪ ನಿರ್ಣಯಿಸಿದೆ.