ಬಸವತತ್ವ ಪೀಠದ ನೇತೃತ್ವ ದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ನಾಟಕೋತ್ಸವ
ಸಂಸ್ಕೃತಿ, ಸಾಹಿತ್ಯ, ಕಲೆ ಮೂಲಕ ಮಾತ್ರ ಸುಸಂಸ್ಕೃತ ಸಮುದಾಯ ಕಟ್ಟಬಹುದು ಎಂದು ಬಸವತತ್ವ ಪೀಠಾಧ್ಯಕ್ಷ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.ಚಿಕ್ಕಮಗಳೂರಿನ ಬಸವತತ್ವ ಪೀಠದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಬಸವತತ್ವ ಪೀಠದ ನೇತೃತ್ವ ದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ನಾಟಕೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೂರದರ್ಶನ ಮನುಷ್ಯ ಇರುವುದಕ್ಕಿಂತ ಬಹಳ ಚಿಕ್ಕದಾಗಿ ತೋರಿಸುತ್ತದೆ. ಸಿನಿಮಾ ಬಹಳ ದೊಡ್ಡವನನ್ನಾಗಿ ತೋರಿ ಸುತ್ತದೆ. ಆದರೆ, ರಂಗಕರ್ಮಿಯಾಗಿ, ಮನುಷ್ಯನನ್ನು ಮನುಷ್ಯನನ್ನಾಗಿ ತೋರಿಸುವ ಒಂದು ಕಲೆ ನಾಟಕ ಮಾತ್ರ ಎಂದರು.
ಇವತ್ತು ಕೆಲ ಧಾರಾವಾಹಿಗಳು ಮನುಷ್ಯನ ವ್ಯಕ್ತಿತ್ವವನ್ನು ಬಹಳ ಸಣ್ಣತನದಲ್ಲಿ ತೋರ್ಪಡಿಸುವ ಕೆಲಸ ಮಾಡುತ್ತಿವೆ. ಮನುಷ್ಯನ ಉದಾತ್ತತೆ ಮರೆಸಿ ಅವನ ಸಣ್ಣತನಗಳು ವಿಜೃಂಭಿಸುವಂತೆ ಮಾಡುವ ಕೆಟ್ಟ ಕೆಲಸಗಳು ದೂರದರ್ಶನದ ಮೂಲಕ ಅಲ್ಲಲ್ಲಿ ನಡೆಯುತ್ತಿವೆ. ಕೆಟ್ಟ ಧಾರಾವಾಹಿಗಳನ್ನು ನೋಡುವ ಬದಲು ಒಂದು ಒಳ್ಳೆಯ ಪುಸ್ತಕ ಓದಿದರೆ ಮನೆ ತನಗಳು ಉದ್ಧಾರವಾಗುತ್ತವೆ ಎಂದು ಕಿವಿಮಾತು ಹೇಳಿದರು.ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಆದಿ ಮಾನವನ ಕಾಲ ದಿಂದಲೇ ನಾಟಕದ ಸ್ವರೂಪಗಳು ಹುಟ್ಟಿಕೊಂಡಿವೆ. ನಾಟಕ ಜಗತ್ತಿಗೆ ಒಳ್ಳೆಯ ಆಯಾಮ ನೀಡಿದೆ. ನಾಟಕ ಅಥವಾ ಆಂಗಿಕ ಅಭಿನಯಗಳು ಜನರಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಮನ್ವಯ ನೀಡುತ್ತಿದ್ದವು ಎಂಬುದು ಇತಿಹಾಸದಿಂದ ತಿಳಿಯುತ್ತದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಮಮತಾ ಅರಸೀಕೆರೆ ಮಾತನಾಡಿದರು. ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶಪ್ಪ ಇದ್ದರು.
--ಫೋಟೋ--ಚಿಕ್ಕಮಗಳೂರಿನ ಬಸವತತ್ವ ಪೀಠದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಬಸವತತ್ವ ಪೀಠದ ನೇತೃತ್ವದ ನಾಟಕೋತ್ಸವಕ್ಕೆ ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಚಾಲನೆ ನೀಡಿದರು. ಈ ವೇಳೆ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ನಾಗರಾಜ್ ರಾವ್ ಕಲ್ಕಟ್ಟೆ ಮೊದಲಾದವರಿದ್ದರು.