ಮುಂಡರಗಿ: ಯಾವ ಪರಿಸರದಲ್ಲಿ ಸಾಹಿತ್ಯ, ಸಂಗೀತ, ಕಲೆ, ನಾಟಕ ಇರುವುದಿಲ್ಲವೋ ಆ ಪರಿಸರ ನಿಂತ ನೀರಾಗಿರುತ್ತದೆ. ಅಲ್ಲಿನ ವಾತಾವರಣದಲ್ಲಿರುವ ವ್ಯಕ್ತಿಯೂ ಹಾಗೆ ಆಗಿರುತ್ತಾನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ತಿಳಿಸಿದರು.
ಗುರುವಾರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮನುಷ್ಯನಲ್ಲಿ ಒಂದು ವ್ಯಕ್ತಿತ್ವ ರೂಪಗೊಳ್ಳಲು ಸಾಹಿತ್ಯ, ಕಲೆ ಮುಖ್ಯವಾಗಿಬೇಕು. ಅವೆಲ್ಲವೂ ಈ ಭಾಗದಲ್ಲಿ ಆಗಬೇಕೆನ್ನುವಂತಹ ಒಂದು ದೊಡ್ಡ ಕನಸು ಇಲ್ಲಿನ ಅನ್ನದಾನೀಶ್ವರ ಸ್ವಾಮೀಜಿಯವರದ್ದಾಗಿದೆ. ಸಾಹಿತ್ಯ, ಸಂಗೀತ, ಕಲೆ, ನಾಟಕಗಳನ್ನು ಪ್ರೋತ್ಸಾಹಿಸುವಲ್ಲಿ ಅನ್ನದಾನೀಶ್ವರ ಸ್ವಾಮೀಜಿ ಕಾರ್ಯ ಶ್ಲಾಘನೀಯ ಎಂದರು.
ಬಹುತೇಕವಾಗಿ ನಮಗೆಲ್ಲರಿಗೂ ಸಾಹಿತ್ತಿಕವಾದ ಕನಸುಗಳು ಇರುವುದಿಲ್ಲ. ನಾವೆಲ್ಲರೂ ದೇವಾಲಯ ಕಟ್ಟುವುದು, ಕಲ್ಯಾಣಮಂಟಪ ಕಟ್ಟುವುದು, ಜಾತ್ರೆ ಮಾಡುವುದು ಮಾಡುತ್ತೇವೆ. ಅದಕ್ಕೆ ನಾವು ಸ್ವಯಂಪ್ರೇರಿತವಾಗಿ ಹಣ ಕೊಟ್ಟು ಭಾಗಿಯಾಗುತ್ತೇವೆ. ಇಂತಹ ಸಾಹಿತ್ಯ, ಸಂಗೀತ, ಕಲೆಗಾಗಿ ಕೆಲಸ ಮಾಡುವಾಗ ಆರ್ಥಿಕ ಸಹಾಯಕ್ಕಾಗಿ ಹೆಚ್ಚಿನ ಕಷ್ಟ ಪಡುತ್ತೇವೆ. ಆದರೆ ಮುಂಡರಗಿಯಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ನಮಗೆ ಡಾ. ಅನ್ನದಾನೀಶ್ವರ ಸ್ವಾಮೀಜಿಯವರು ಜಮೀನು ದಾನ ನೀಡುವುದರ ಜತೆಗೆ ₹1.50 ಲಕ್ಷ ಹಣವನ್ನು ನೀಡಿದ್ದರ ಪರಿಣಾಮವೇ ಸುಸಜ್ಜಿತ ತಾಲೂಕು ಸಾಹಿತ್ಯ ಭವನ ನಿರ್ಮಾಣವಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಸ್ವಾಮೀಜಿಯವರಿಗೆ ಹಾಗೂ ತಾಲೂಕಿನ ಎಲ್ಲ ಸಾಹಿತ್ಯ ಮನಸ್ಸುಗಳಿಗೆ ಅಭಿನಂದಿಸುವೆ ಎಂದರು.ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ತಾಲೂಕು ಕಸಾಪ ಭವನವನ್ನು ಎಲ್ಲ ಸಾಹಿತ್ಯಾಸಕ್ತ ಹಣದಲ್ಲಿ ಸ್ವತಃ ತಾಲೂಕು ಕಮಿಟಿಯೇ ಮುಂದೆ ನಿಂತು ಮಾಡಿಸಿರುವುದು ಹೆಚ್ಚು ಅನುಕೂಲವಾಗಿದೆ. ಸರ್ಕಾರ ಯಾವುದೇ ಇಲಾಖೆಗೆ ಹಣ ನೀಡಿ ಆ ಮೂಲಕ ಇಂತಹ ಕಾಮಗಾರಿ ಮಾಡುವುದರಿಂದ ಅವರಿಗೆ ಶೇ. 60ರಷ್ಟು ಹಣ ಕೊಟ್ಟು ಉಳಿದ ಶೇ. 40ರಷ್ಟರಲ್ಲಿ ಮಾತ್ರ ಕಾಮಗಾರಿ ಮಾಡಬೇಕು. ಇದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಮುಂಡರಗಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕೆನ್ನುವ ದೃಷ್ಟಿಯಿಂದ ಶ್ರೀಮಠದ ಜಮೀನನ್ನು ಹಾಗೂ ನಗದು ಹಣವನ್ನು ದಾನ ನೀಡಿದ್ದು, ಆ ಜಮೀನಿನಲ್ಲಿ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆಯಲ್ಲಿ ಉತ್ತಮವಾದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನ ನಿರ್ಮಾಣ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚನ್ನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಬಿ. ಹಿರೇಮಠ, ಕಸಾಪ ಭವನ ಕಟ್ಟಡ ಸಮಿತಿ ಅಧ್ಯಕ್ಷ ನಾಗೇಶ ಹುಬ್ಬಳ್ಳಿ, ನಾಗೇಶ ಹುಬ್ಬಳ್ಳಿ, ಸಿ.ಕೆ. ಗಣಪ್ಪನವರ, ಕಾಶಿನಾಥ ಮಾತನಾಡಿದರು. ಶಂಕರ ಕುಕನೂರ, ವೀಣಾ ಪಾಟೀಲ, ಕಾಶೀನಾಥ ಬಿಳಿಮಗ್ಗದ, ಕೃಷ್ಣಾ ಸಾಹುಕಾರ, ಆರ್.ವೈ. ಪಾಟೀಲ, ಸುರೇಶ ಭಾವಿಹಳ್ಳಿ, ವೀರೇಶ ಬಾಗೋಡಿ, ಎನ್.ಎನ್. ಕಲಕೇರಿ, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್.ಎಲ್. ಪೊಲೀಸಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ. ಹಿರೇಮಠ ಸ್ವಾಗತಿಸಿ, ಮಂಜುನಾಥ ಮುಧೋಳ ನಿರೂಪಿಸಿದರು.