ಅಂಕೋಲಾ: ಬದುಕಿನ ಅನುಭವದಿಂದ ಹುಟ್ಟಿದ ಸಾಹಿತ್ಯ ಜನರ ಮೆಚ್ಚುಗೆ ಪಡೆಯುತ್ತಿದೆ. ಅಲ್ಲದೇ ಸಾಹಿತ್ಯ ಲೋಕದಲ್ಲಿ ಸ್ಥಿರವಾಗಿ ಉಳಿಯುತ್ತದೆ. ಸಾಹಿತ್ಯ ಸೃಷ್ಟಿಯಲ್ಲಿ ಕಲ್ಪನೆಗೆ ಅವಕಾಶವಿದ್ದರೂ ಅನುಭವದ ಮೂಸೆಯಲ್ಲಿ ರೂಪುಗೊಂಡ ಸಾಹಿತ್ಯ ಜನಮಾನಸವನ್ನು ಬೇಗನೆ ತಲುಪುತ್ತದೆ ಎಂದು ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹೇಳಿದರು.
ಕತೆಗಾರ ಪ್ರೋ. ರಾಮಕೃಷ್ಣ ಗುಂದಿ ಮಾತನಾಡಿ, ಜನಾರ್ದನ ನಾಯಕರ ಕಥಾಸಂಕಲನದ ಬಹುತೇಕ ಕಥೆಗಳು ನೈಜ ಘಟನೆಗಳನ್ನು ಆಧರಿಸಿದ್ದು ನಾಯಕರ ವಿಶಿಷ್ಟ ನಿರೂಪಣೆಯಿಂದ ಓದುಗರನ್ನು ಆಕರ್ಷಿಸುತ್ತಿದೆ ಎಂದರು.
ಲೇಖಕ ಜನಾರ್ದನ ನಾಯಕ ಮಾತನಾಡಿ, ನನ್ನ ಕೃತಿ ಕರ್ನಾಟಕ ಸಂಘದಲ್ಲಿ ಬಿಡುಗಡೆಯಾಗುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಮಹಾಂತೇಶ ರೇವಡಿ ಮಾತನಾಡಿ, ಜನಾರ್ದನ ನಾಯಕರ ಕತೆಗಳಲ್ಲಿ ಸಾಮಾಜಿಕ ಕಾಳಜಿ, ಮಾನವೀಯತೆ ಕಾಣಬಹುದು ಎಂದರು.ಇದೇ ಸಂದರ್ಭದಲ್ಲಿ ಶಾಂತಾರಾಮ ನಾಯಕ, ರಾಮಕೃಷ್ಣ ಗುಂದಿ, ಮಹಾಂತೇಶ ರೇವಡಿ, ಜನಾರ್ದನ ನಾಯಕ ಅವರನ್ನು ಗೌರವಿಸಲಾಯಿತು.