ಸಾಹಿತ್ಯದಿಂದ ಚಿಂತನಶೀಲ ಮನಸ್ಸು ಕಟ್ಟಲು ಸಾಧ್ಯ: ರವಿ ದೇವರಡ್ಡಿ

KannadaprabhaNewsNetwork |  
Published : May 07, 2026, 02:30 AM IST
ಕಾರ್ಯಕ್ರಮವನ್ನು ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ ಈ ನೆಲದ ಜನರ ವಿಶ್ವವಿದ್ಯಾಲಯವಾಗಬೇಕು. ನಾಡಿನ ಅಭಿವೃದ್ಧಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿ ಕೆಲಸ ಮಾಡಬೇಕು ಎಂಬ ಆಶಯವನ್ನು ರಾಜರು ಹೊಂದಿದ್ದರು.

ಮುಂಡರಗಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡು, ನುಡಿಗಾಗಿ ವ್ಯವಸ್ಥಿತ ಕಾರ್ಯ ಆರಂಭಿಸಬೇಕೆನ್ನುವ ಯೋಚನೆಯನ್ನು ಹಿರಿಯರೊಂದಿಗೆ ಚರ್ಚಿಸಿದಾಗ ಹುಟ್ಟಿದ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್. ಸಾಹಿತ್ಯದ ಮೂಲಕ ಚಿಂತನಾಶೀಲ ಮನಸ್ಸುಗಳನ್ನು ಕಟ್ಟಲು ಸಾಧ್ಯವೆಂದು ಯೋಚಿಸಿದ್ದರು ಎಂದು ಶಿಕ್ಷಕ ರವಿ ದೇವರಡ್ಡಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಹಾಗೂ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಈ ನೆಲದ ಜನರ ವಿಶ್ವವಿದ್ಯಾಲಯವಾಗಬೇಕು. ನಾಡಿನ ಅಭಿವೃದ್ಧಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿ ಕೆಲಸ ಮಾಡಬೇಕು ಎಂಬ ಆಶಯವನ್ನು ರಾಜರು ಹೊಂದಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಕನ್ನಡ ನಾಡಿಗೆ ತನ್ನದೆ ಆದ ಇತಿಹಾಸವಿದೆ. 1915ರ ಮೇ 5ರಂದು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಅವರ ಆಳ್ವಿಕೆಯ ಕಾಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಲಾಯಿತು ಎಂದರು. ಕಸಾಪ ಕಾರ್ಯಕಾರಿ ಮಂಡಳಿ ಸದಸ್ಯ ಕಾಶೀನಾಥ ಬಿಳಿಮಗ್ಗದ ಕನ್ನಡ ಭಾಷೆಯ ಶ್ರೇಷ್ಠತೆ ಮಹತ್ವದ ಕುರಿತು, ಅತಿಥಿಯಾಗಿ ಪಾಲ್ಗೊಂಡಿದ್ದ ಬಿಇಒ ಗಂಗಾದರ ಅಣ್ಣಿಗೇರಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಪ್ರೊ. ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಾಲೂಕು ಕಸಾಪ ಘಟಕದಿಂದ ಸನ್ಮಾನಿಸಲಾಯಿತು. ಮುಂಡರಗಿ ನಾಟ್ಯಬಿಂದು ಅಕಾಡೆಮಿಯ ಮಕ್ಕಳಿಂದ ನೃತ್ಯ ಜರುಗಿತು.

ಈ ಸಂದರ್ಭದಲ್ಲಿ ಡಾ. ಸಂತೋಷ ಹಿರೇಮಠ, ಡಾ. ನಿಂಗು ಸೊಲಗಿ, ಮಂಜುನಾಥ ಮುಧೋಳ, ಎನ್.ಎನ್. ಕಲಕೇರಿ, ಸುರೇಶ ಬಾವಿಹಳ್ಳಿ, ಕೃಷ್ಣಮೂರ್ತಿ ಸಾಹುಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಂಕರ ಕೂಕನೂರ ಸ್ವಾಗತಿಸಿದರು. ಜೆ. ಕುಮಾರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿನ ನುಡಿ, ಜಲ, ನೆಲ, ಸಂಸ್ಕೃತಿ ಕಾಪಾಡುವುದು ಕಸಾಪ ಕೆಲಸ: ಸುರೇಶ ಕಲ್ಲೊಳಿ
ನೂತನ ಶಾಖೆಯ ಅಭಿವೃದ್ಧಿಗೆ ಸಹಕಾರ ನೀಡಿ: ಮಾದೇವ ನಾಯ್ಕ