ಮುಂಡರಗಿ: ಮುಂಗಾರು ಮಳೆ ಕೊರತೆ ಮಧ್ಯದಲ್ಲಿಯೂ ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿರುವ ಕಪ್ಪತ್ತಗಿರಿಯ ಮಡಿಲಲ್ಲಿ ಶನಿವಾರ ನಡೆದ ಕಪ್ಪತ್ತಗಿರಿ ಸಾಹಿತ್ಯೋತ್ಸವದಲ್ಲಿ 40ಕ್ಕೂ ಹೆಚ್ಚು ಸಮಾನ ಮನಸ್ಕರು ಒಂದೆಡೆ ಸೇರಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು. ಪ್ರಕೃತಿಯೊಂದಿಗೆ ಸಾಹಿತ್ಯ, ಪರಿಸರ ಜಾಗೃತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಸೆಯುವ ಅಪರೂಪದ ಪ್ರಯತ್ನ ಇದಾಗಿತ್ತು.ಯುವ ಸಾಹಿತಿ ಸಿದ್ದು ಸತ್ಯಣ್ಣವರ ಪರಿಕಲ್ಪನೆಯಲ್ಲಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಹಿತ್ಯೋತ್ಸವಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾರ್ಗದರ್ಶನ ನೀಡಿದರು. ಡೋಣಿ ಗ್ರಾಮದ ಅರಣ್ಯ ಪರಿಸರ ಶಿಬಿರದಿಂದ ಆರಂಭವಾದ ಚಾರಣವು ಕಪ್ಪತ್ತಗಿರಿಯ ಪ್ರಮುಖ ತಾಣಗಳಾದ ಬಂಗಾರಕೊಳ್ಳ, ನವಣಿ ರಾಶಿ, ನೈಸರ್ಗಿಕ ಧ್ಯಾನ ಮಂದಿರ, ಸಿದ್ದರಾಮೇಶ್ವರ ಪಡಿ, ಉಪ್ಪಿನ ಪಡಿ, ಗಾಳಿಗುಂಡಿ ಬಸವಣ್ಣ ಹಾಗೂ ಮಂಜಿನದೋಣಿ ಕಣಿವೆ, ಅಡಿಕೆ ಕಣಿವೆ ಸೇರಿದಂತೆ ಹಲವು ಪ್ರಕೃತಿ ವೈವಿಧ್ಯಮಯ ಸ್ಥಳಗಳಲ್ಲಿ ಸಾಗಿತು.ಸಿದ್ದು ಸತ್ಯಣ್ಣವರ ಮಾತನಾಡಿ, ಶುದ್ಧಗಾಳಿಗೆ ಹೆಸರಾದ ಕಪ್ಪತ್ತಗುಡ್ಡದ ಮೇಲೆ ಸುರಿಯುವ ಮಳೆ ಬಂಗಾರಕೊಳ್ಳದಂತಹ ಇನ್ನಿತರ ಜಾಗಗಳ ಮೂಲಕ ಹರಿದು ಸುತ್ತಮುತ್ತಲ ಹಳ್ಳಿಗಳ ಕೆರೆಕೊಳ್ಳಗಳನ್ನು ತುಂಬಿಸಿ, ಕೃಷಿಗೂ ನೆರವಾಗುತ್ತದೆ. ನೂರಾರು ಎಕರೆ ಅಧಿಕ ಕೃಷಿಭೂಮಿಗೂ ನೀರಾವರಿ ಒದಗಿಸುತ್ತದೆ. ಆದ್ದರಿಂದ ಕಪ್ಪತ್ತಗಿರಿಯನ್ನು ಉಳಿಸುವುದು ಕೇವಲ ಅರಣ್ಯ ಸಂರಕ್ಷಣೆಯಲ್ಲ, ಕೃಷಿ ಮತ್ತು ಗ್ರಾಮೀಣ ಬದುಕಿನ ರಕ್ಷಣೆಯೂ ಆಗಿದೆ ಎಂದರು.
ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಸಾಹಿತಿ ಸನತಕುಮಾರ ಬೆಳಗಲಿ ದಂಪತಿ ವಹಿಸಿದ್ದರು. ಮಹಾಂತೇಶ ಖೋತ, ಉದಯ ರಾಯರೆಡ್ಡಿ, ಸಂಗಮೇಶ ಮೆಣಸಿನಕಾಯಿ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ್, ರಾಹುಲ ಬೆಳಗಲಿ, ಜೆ. ಕುಮಾರ್, ತುಕಾರಾಂ ನಾಯ್ಕ್, ವಿನೋದ ಪಾಟೀಲ, ಬದರೀ ಪ್ರಸಾದ್, ಟಿ.ಎಸ್. ಗೊರವರ, ಆರೀಫ ರಾಜಾ, ಕಿರಣ ಅಕ್ಕಿ, ವಿ. ಹರಿನಾಥಬಾಬು, ಶ್ರೀಪಾದರಾಜ ಮುರುಡಿ, ಕಳಕೇಶ ಗುಡ್ಲಾನೂರ, ಸಿಕಂದರ ಮೀರಾನಾಯ್ಕ, ದೇವೇಂದ್ರ ಜಿರ್ಲಿ, ಅನಿಲ ಗುನ್ನಾಪುರ, ಎಲ್. ತಿಪ್ಪಾನಾಯ್ಕ್, ರವಿ ಹಂಪಿ, ಭೂಪೇಶ, ಸಲೀಮ್ ಬಳಬಟ್ಟಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮೈಲಾರಪ್ಪ ಮಡಿವಾಳರ, ತೋಟಯ್ಯ ಬಾಳಿಹಳ್ಳಿಮಠ, ರವಿ ದೊಡ್ಡಮನಿ ಹಾಗೂ ಇತರರು ಚಾರಣದಲ್ಲಿ ಹೆಜ್ಜೆ ಹಾಕಿದರು.