ಸಂಡೂರು: ಸಾಹಿತ್ಯವು ಜೀವನದ ಪ್ರತಿಬಿಂಬವಾಗಿದ್ದು, ಅದು ನಿಸರ್ಗ ಪ್ರೀತಿ, ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ. ಚಿಲ್ಕರಾಗಿ ಅಭಿಪ್ರಾಯಪಟ್ಟರು.
ಶ್ರೀಮಂತ ಪರಂಪರೆಯನ್ನು ಹೊಂದಿದ ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಾರಂತ ಮೊದಲಾದ ಕನ್ನಡ ಕವಿಗಳು ಸಾಹಿತ್ಯದಲ್ಲಿ ಪ್ರಕೃತಿಯನ್ನು ಹಲವು ಬಗೆಯಲ್ಲಿ ವರ್ಣಿಸಿದ್ದಾರೆ. ಸಮೃದ್ಧವಾಗಿರುವ ಇಂತಹ ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಪ್ರಕೃತಿ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕುವೆಂಪು ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಳ್ಳಾರಿಯ ಉಪನ್ಯಾಸಕ ಡಾ.ಯು. ಶ್ರೀನಿವಾಸಮೂರ್ತಿ, ನಿಸರ್ಗ ಪ್ರೀತಿ ಕುವೆಂಪು ಸಾಹಿತ್ಯದ ಜೀವಾಳವಾಗಿದ್ದು, ಸುಂದರವಾದ ಪ್ರಕೃತಿಯ ಮಡಿಲಲ್ಲಿ ಬೆಳೆದ ಕುವೆಂಪುರವರು ತಮ್ಮ ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಮಳೆ, ಮೋಡ, ನದಿ, ಕಾಡು, ಗುಡುಗು-ಸಿಡಿಲುಗಳ ಆರ್ಭಟ, ಸೂರ್ಯ-ಚಂದ್ರ, ಕಲ್ಲ ಕಣ್ಣು ಕೆರೆಗಳ, ಮಲೆನಾಡಿನ ಸೊಬಗಿನ ಪ್ರಕೃತಿಯನ್ನು ವೈವಿದ್ಯಮಯವಾಗಿ ಚಿತ್ರಿಸಿದ್ದಾರೆ ಎಂದು ವಿವರಿಸಿದರು.ಕಾಲೇಜಿನ ಪ್ರಾಚಾರ್ಯ ಡಾ.ಡಿ. ರ‍್ರೆಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸಾಹಿತ್ಯ ಕಾರ್ಯಕ್ರಮ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಅಂಬೇಡ್ಕರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಗುರುಪ್ರಸಾದ್, ಗ್ರಾಮದ ಮುಖಂಡರಾದ ಮಹಾಂತೇಶ್, ಪಂಪನಗೌಡ, ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕ ಅಬ್ದುಲ್ ಹೈ ತೋರಣಗಲ್ಲು, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.