ಯಲಬುರ್ಗಾ: ಸಾಹಿತ್ಯ ಎಂಬುದು ಬದುಕಿನ ಮೌಲ್ಯ ತಿಳಿಸುವ ಶಾಸ್ತ್ರವಾಗಿದೆ ಎಂದು ಕೊಪ್ಪಳ ವಿವಿ ಕುಲಸಚಿವ ಡಾ. ಎಸ್.ವಿ.ಡಾಣಿ ಹೇಳಿದರು.
ಸಾಹಿತ್ಯವು ಬದುಕಿನ ಕೈಗನ್ನಡಿಯಾಗಿ ಕೆಲಸ ಮಾಡುತ್ತದೆ. ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರಿದ್ದಾನೆ. ಜಗತ್ತಿನ ಜನರೆಲ್ಲ ಏಕಭಾವದಲ್ಲಿ ಬದುಕಬೇಕು ಎಂಬುದು ಆತನ ಒಲವಾಗಿತ್ತು. ಆನಂತರ ಬಂದ ಬಸವಾದಿ ಶರಣರು ಸೋಹಂ ಬದಲಾಗಿ ದಾಸೋಹಂ ಎನ್ನುತ ದುಡಿದದ್ದರಲ್ಲಿ ಇತರರಿಗೂ ಹಂಚಿ ಬದುಕಬೇಕು ಎಂದು ಸಾರಿದ್ದಾರೆ.
ಗಾಂಧೀಜಿ ಹೇಳುವ ಏಳು ಪಾಪಗಳಲ್ಲಿ ಚಾರಿತ್ರ್ಯವಿಲ್ಲದ ಜ್ಞಾನ ಮತ್ತು ಮಾನವೀಯತೆ ಇಲ್ಲದ ವಿಜ್ಞಾನ ದೇಶದ ಬೆಳವಣಿಗೆಗೆ ಮಾರಕವಾಗಬಲ್ಲವು ಎಂದಿದ್ದಾರೆ. ಇಂದು ವಿಜ್ಞಾನ ಬಹುದೊಡ್ಡ ಪ್ರಗತಿ ಹೊಂದಿದೆ. ಎಐ ತಂತ್ರಜ್ಞಾನ ಬಂದಮೇಲೆ ಜಗತ್ತು ನಮ್ಮ ಮನಸಿಗೆ ಬೇಕಾದ ಹಾಗೆ ಸೃಜಿಸಿ ನೋಡುವ ಸಾಧ್ಯತೆಯನ್ನು ರೂಪಿಸಿದೆ. ಸಾಮಾಜಿಕ ಜಾಲತಾಣವು ಜಗತ್ತಿನ ಕಸದಬುಟ್ಟಿಯಂತಾಗಿದೆ.ವಿಜ್ಞಾನಕ್ಕೆ ಸಾಹಿತ್ಯ, ಕರುಣೆ, ಕಾಳಜಿಗಳು ಜೊತೆಯಾದರೆ ಇವತ್ತಿನ ಅನುಬಂಧ ಪರಿಕಲ್ಪನೆಗೆ ಅರ್ಥ ಬಂದಂತಾಗುತ್ತದೆ ಎಂದರು.ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಕೆ.ಎಚ್. ಛತ್ರದ ಮಾತನಾಡಿ, ಶ್ರಮ, ಸತತ ಪ್ರಯತ್ನವಿಲ್ಲದೆ ಯಾವುದೇ ಸಾಧನೆ ಅಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು ಎಂದರು.
ಈ ಸಂದರ್ಭ ಡಾ. ರವೀಂದ್ರ ಬೆಟಗೇರಿ, ಡಾ. ಡಿ.ಎಂ.ಪ್ರಹ್ಲಾದ, ಡಾ.ಕಾಳಮ್ಮ, ದೀಪಾ, ಕೋಮಲಾ, ರಾಜಿಮಾ ಬೇಗಂ, ರೇಖಾ, ಅಶ್ವಿನಿ, ಅಕ್ಷತಾ, ಶರಣಗೌಡ, ಶ್ರೀಕಾಂತ ಹಾಗೂ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.