ರಾಮನಗರ: ಸಾಹಿತ್ಯ ಮತ್ತು ಬದುಕು ಎರಡೂ ಒಂದರೊಳಗೊಂದು ಬೆರೆತು ಅನುಭವದ ಮೂಸೆಯಲ್ಲಿ ಪರಿಪಕ್ವಗೊಂಡು ಹೊರಹೊಮ್ಮುವ ಸಂಜೀವಿನಿ. ಸಾಹಿತ್ಯವಿರದ ಬದುಕನ್ನು ಊಹಿಸಬಹುದು. ಆದರೆ ಬದುಕಿರದ ಸಾಹಿತ್ಯ ಇರಲಾರದು. ಬುದ್ಧಿಗೆ ಪ್ರೇರಣೆ, ಮನಸ್ಸಿಗೆ ರಂಜನೆ, ಗುರಿ ಸಾಧನೆಗೆ ದಾರಿ ತೋರುವುದೇ ಸಾಹಿತ್ಯ ಎಂದು ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್ ಹೇಳಿದರು.
ಕೃತಿ ಬರೆಯುವುದು ಮುಖ್ಯವಲ್ಲ, ಆನಂತರದ ವಿನಯ ಮುಖ್ಯ, ಬರೆವ ತನಕ ಕಾಪಿ ರೈಟ್, ಬರೆದ ಮೇಲೆ ಕಾಪಿ ಲೆಫ್ಟ್ ಎಂಬ ತತ್ವದ ಮೇಲೆ ಈ ಕೃತಿಗಳನ್ನು ಬರೆದಿರುವುದಾಗಿ ಬೈರೇಗೌಡರು ಅತ್ಯಂತ ವಿನಯದಿಂದ ಹೇಳಿಕೊಳ್ಳುತ್ತಾರೆ. ಮೂರೂ ಕೃತಿಗಳಲ್ಲಿ ಬೈರೇಗೌಡರ ಅಪಾರ ಅನುಭವ, ಬಡತನದ ನೋವು, ಅನ್ನದ ಅಲಭ್ಯತೆ, ತನ್ನೂರಿನ ಸರ್ವಜನಾಂಗ, ಬೆಳೆದ ಪರಿಸರ, ಬೆಟ್ಟ-ಗುಡ್ಡಗಳು, ನದಿ ಕಣಿವೆಗಳು ಎಲ್ಲವೂ ಅವರ ಬದುಕಿನ ಮೇಲೆ ಪ್ರಭಾವಿಸಿರುವುದನ್ನು ಈ ಬರೆಹಗಳಲ್ಲಿ ಗುರುತಿಸಬಹುದು. ಅರ್ಪಣೆಯಲ್ಲಿ ಒಂದು ವಿಶೇಷತೆಯಿದೆ. ಈ ಬರಹ ಹುಟ್ಟಲು ಕಾರಣವಾದ ಎಲ್ಲರಿಗೆ ಮತ್ತು ಎಲ್ಲದಕ್ಕೆ ಅರ್ಪಿಸಿರುವುದು ಇವರ ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿ ಎಂದರು.
ಪಾದರಿ ಪರಿಮಳ ಕಥಾಸಂಕಲನ ಕೃತಿ ಪರಿಚಯಿಸಿದ ಸಾಹಿತ್ಯ ಸಂಶೋಧಕಿ ಡಾ. ಸುನೀತಾ, ಕಥೆಗಾರ ಬೈರೇಗೌಡರು ಇಲ್ಲಿನ ಕತೆಗಳ ಮೂಲಕ ತಮ್ಮ ವ್ಯಕ್ತಿತ್ವದ ಅನಾವರಣ ಮಾಡಿಕೊಂಡಿದ್ದಾರೆ. ನಿಮಿಸಿಸ್ ಪರಿಕಲ್ಪನೆಯಲ್ಲಿ ತಾವು ನಿರ್ಮಿಸಿಕೊಂಡ ಜಗತ್ತಿನ ಎಲ್ಲ ಆಗುಹೋಗುಗಳಿಗೆ ಸ್ಪಂದಿಸುವ ಗುಣ ಈ ಕಥೆಗಳಲ್ಲಿ ಕಂಡುಬರುತ್ತದೆ. ಇವರ ಸಾಹಿತ್ಯ ಸೃಷ್ಟಿ ಅಂತರ್ಮುಖಿ ಮತ್ತು ಬಹಿರ್ಮುಖಿ ಎರಡೂ ನೆಲೆಗಳಲ್ಲಿ ನಿರ್ಮಾಣಗೊಂಡಿದೆ. ಉದ್ವೇಗರಹಿತ, ಕಲ್ಪಿತವಾದರೂ ನೈಜತೆಯ ನೆಲೆಯಲ್ಲಿ ಈ ಕತೆಗಳು ಓದಿಸಿಕೊಂಡು ಹೋಗಬಲ್ಲವು. ಬೈರೇಗೌಡರ ಬರೆಹದ ವಿಶಿಷ್ಟತೆಯೆಂದರೆ ನಾನು-ಅವನು ಕತೆಯ ಮೂಲಕ ಕಥಾನಾಯಕನ ವರ್ಣನೆ, ಅವನ ತಾಕಲಾಟ, ತಳಮಳ ಮತ್ತು ಸಮಾಜದ ಎಲ್ಲ ಕ್ರಿಯೆಗಳಿಗೆ ಸ್ಪಂದಿಸುವ ಗುಣ, ಮಾನವ ಸಂಬಂಧಗಳಿಗೆ ವ್ಯಕ್ತಿ ಕೊಡಬೇಕಾದ ಗೌರವ ಇತ್ಯಾದಿಗಳನ್ನು ಅರ್ಕಾವತಿ ನದಿ ಮೂಲಕ ಹೇಳಿಸುವ ಹೊಸತನ ಮೂಡಿಬಂದಿದೆ. ಈ ಮೂಲಕ ಹೊಸದೊಂದು ಪರಂಪರೆಗೆ ನಾಂದಿ ಹಾಡಿದ್ದಾರೆ ಎನ್ನಬಹುದು ಎಂದು ಹೇಳಿದರು.ಕವನ ಸಂಕಲನ ಮತ್ತು ನಾಟಕ ಕೃತಿಯನ್ನು ಪರಿಚಯಿಸಿದ ರಂಗಕರ್ಮಿ ಎಂ.ಸಿ.ನಾಗರಾಜ್, ಅರ್ಕ-ಬುರ್ಕ ನಾಟಕ ಕೃತಿ ಎಲ್ಲಿಯೂ ನೆಗೆಟಿವ್ ಆಲೋಚನೆಗಳಿಗೆ ಎಡೆಕೊಡುವುದಿಲ್ಲ. ಆ ಕಾರಣದಿಂದಲೇ ತಾವು ಸೃಷ್ಟಿಸಿರುವ ಇಬ್ಬರು ಅಂಧ ವ್ಯಕ್ತಿಗಳಿಗೆ ಅರ್ಕ-ಬುರ್ಕ ಎಂಬ ಹೆಸರು ನೀಡಿದ್ದಾರೆ. ಇಲ್ಲಿ ಶಾಲಾ ಮಕ್ಕಳ ಸಾಮಾನ್ಯ ಹೆಸರುಗಳಿವೆ. ಅಮ್ಮ ಎಂಬ ಸಾರ್ವತ್ರಿಕ ಅಮ್ಮನನ್ನು ತಮ್ಮ ನಾಟಕದ ಪಾತ್ರದಲ್ಲಿ ತಂದಿದ್ದಾರೆ. ಹೀಗಾಗಿ ಪೂರ್ವಾಗ್ರಹ ಪೀಡಿತರಾಗಿ ಹೀಗೇ ಇರಬೇಕೆಂಬ ಯಾವ ಕಟ್ಟುಪಾಡುಗಳನ್ನೂ ಹಾಕಿಕೊಳ್ಳದಿರುವುದು ಈ ನಾಟಕದ ರಚನೆಯಾಗಿದೆ ಎಂದು ತಿಳಿಸಿದರು.
ಅಂಕಣಕಾರ ಅಣುಕು ರಾಮನಾಥ್ ಮಾತನಾಡಿ, ಸಾಹಿತ್ಯದ ಅಂತಿಮ ಗುರಿ ಸಹೃದಯನಲ್ಲಿ ಹೊಸ ಭಾವಗಳನ್ನು ಮೂಡಿಸಿ, ಆ ಮೂಲಕ ಚೈತನ್ಯ ತುಂಬುವುದೇ ಆಗಿರುತ್ತದೆ. ಬೈರೇಗೌಡರ ಬರೆಹದಲ್ಲಿ ಆ ಬಗೆಯ ಹೊಸತನ ಮತ್ತು ಚೈತನ್ಯದಾಯಿ ಗುಣಗಳು ಅನಾವರಣಗೊಂಡಿವೆ. ಅವರ ಕವಿತೆಗಳಾಗಲೀ, ನಾಟಕ ಮತ್ತು ಕಥನರೂಪದ ಬರೆಹಗಳೆಲ್ಲವೂ ಹೊಸ ಮಾದರಿಯೊಂದನ್ನು ಕಟ್ಟಿಕೊಟ್ಟಿವೆ. ಕಾವ್ಯಮೀಮಾಂಸೆಯ ತತ್ವಗಳನ್ನು ಮೀರಿ ನಿರ್ಮಾಣವಾದ ಈ ಕೃತಿಗಳು ಸಾರ್ವಕಾಲಿಕವಾಗಿ ನಿಲ್ಲಬಲ್ಲವು ಎಂದು ಹೇಳಿದರು.
ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಿಂದ ಜಾನಪದ ಸಂಗೀತ ಸಂಬಂಧಿ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಅಂತಾರಾಷ್ಟ್ರೀಯ ಜನಪದ ಗಾಯಕ ಜೋಗಿಲ ಸಿದ್ಧರಾಜು ಅವರನ್ನು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ನ್ಯೂಎಕ್ಸ್ ಪರ್ಟ್ ಕಾಲೇಜು ಪ್ರಾಂಶುಪಾಲ ಡಾ. ಡಿ.ಆರ್.ರವಿಕುಮಾರ್ ಮಾತನಾಡಿದರು. ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಉಪಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕ ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.15ಕೆಆರ್ ಎಂಎನ್ 2.ಜೆಪಿಜಿ
ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ಸಾಹಿತಿ ಡಾ. ಎಂ. ಬೈರೇಗೌಡರ ಕಥಾಸಂಕಲನ ಪಾದರಿ ಪರಿಮಳ, ನಾಟಕ ಅರ್ಕ-ಬುರ್ಕ ಹಾಗೂ ಕವನ ಸಂಕಲನ ಕದವಿದರ ಮನೆ ಮೂರು ಕೃತಿಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು.