ಪ್ರಜ್ವಲ್‌ ಬಂಧಿಸಿ: ಸಿಎಂಗೆ 107 ಸಾಹಿತಿಗಳಿಂದ ಪತ್ರ

KannadaprabhaNewsNetwork | Updated : May 16 2024, 11:56 AM IST

ಸಾರಾಂಶ

ಎಲ್ಲಿದ್ದರೂ ಆತನನ್ನು ಕರೆತಂದು ಜೈಲಿಗೆ ಹಾಕಿ. ಅವರ ಕುಟುಂಬದ ಎಲ್ಲ ಸರ್ಕಾರಿ ಸೌಲತ್ತು ರದ್ದುಪಡಿಸಿ ಎಂದು 107 ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

 ಬೆಂಗಳೂರು :  ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಕೂಡಲೇ ಬಂಧಿಸಬೇಕು. ಎಸ್‌ಐಟಿ ತನಿಖೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ಆ ಕುಟುಂಬಕ್ಕೆ ಒದಗಿಸಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂಬುದು ಸೇರಿದಂತೆ 16 ಬೇಡಿಕೆಗಳನ್ನು ಒಳಗೊಂಡ ಬಹಿರಂಗ ಪತ್ರವನ್ನು ಪ್ರಗತಿಪರ ಸಾಹಿತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ.

''''ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರ’ ಎಂಬ ಹೆಸರಿನಲ್ಲಿ ಸಾಹಿತಿಗಳಾದ ಕುಂ.ವೀರಭದ್ರಪ್ಪ, ವಸುಂಧರಾ ಭೂಪತಿ ಸೇರಿದಂತೆ ಹಲವು ಸಾಹಿತಿಗಳು, ಮಹಿಳಾ ಪರ ಹೋರಾಟಗಾರರು ಸೇರಿದಂತೆ 107 ಮಂದಿ ಸಹಿಯುಳ್ಳ ಪತ್ರವನ್ನು ಮುಖ್ಯಮಂತ್ರಿಗಳಿಗೆ ಬರೆಯಲಾಗಿದೆ.

ಪತ್ರದಲ್ಲಿ ಈ ಲೈಂಗಿಕ ಹಗರಣವು ಅತ್ಯಂತ ಹೇಯ ಕೃತ್ಯ. 2900 ವಿಡಿಯೋ ಮತ್ತು ಫೋಟೋಗಳಲ್ಲಿ ದಾಖಲಿಸಿ ಇಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು ಸೇರಿ ಇವೆಲ್ಲಾ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣ. ಹೀಗಾಗಿ ಇದನ್ನು ಮುಚ್ಚಿಟ್ಟಿರುವುದು ಸಹ ಅಪರಾಧ. ಈ ಎಲ್ಲ ಕೋನಗಳಲ್ಲಿ ತನಿಖೆ ನಡೆಸಿ ಎಲ್ಲ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.

ಪತ್ರದ ವಿವರ:  ಹಗರಣವನ್ನು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿ ಮತ್ತು ಚುನಾವಣೆಗೆ ಬಳಸುತ್ತಿರುವುದು ಮತ್ತಷ್ಟು ಆಘಾತಕಾರಿ. ಅಂತಹವುಗಳಿಗೆ ಕಡಿವಾಣ ಹಾಕಬೇಕು. ಪ್ರಜ್ವಲ್ ರೇವಣ್ಣ ಅವರ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಕುಟುಂಬಸ್ಥರು ಪ್ರಜಾಪ್ರಭುತ್ವದ ಮುಸುಕಿನೊಳಗೆ ಪಾಳೇಗಾರಿಕೆಯ ಆಡಳಿತ ನಡೆಸಿದ್ದಾರೆ. ಈ ಹಗರಣ ಬಯಲಾದರೂ ಹಾಸನದ ಚುನಾವಣೆ ಸ್ಥಗಿತಗೊಳಿಸದೆ, ಆರೋಪಿಯನ್ನು ಚುನಾವಣೆಗೆ ಸ್ಪರ್ಧೆ ಮಾಡಲು ಬಿಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ ಎಂದು ಕಿಡಿ ಕಾರಿದ್ದಾರೆ.

ಆರೋಪಿಯನ್ನು ಯಾಕೆ ಬಂಧಿಸಿಲ್ಲ?:ಹಗರಣ ಬಯಲಾದರೂ ಏ.22ರಿಂದ 26ರವರೆಗೆ ಆರೋಪಿಯನ್ನು ಯಾಕೆ ಬಂಧಿಸಲಿಲ್ಲ? ಇದು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಅವರು ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂತ್ರಸ್ತೆ ಘನತೆ ಕುಂದಿಸುವ, ಅವರನ್ನೇ ಅಪರಾಧಿಗಳಂತೆ ಬಿಂಬಿಸುವ ಸಮೂಹ ಮಾಧ್ಯಮಗಳ ವರದಿ ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿದೆ. ಈ ವಿಡಿಯೋಗಳು ಯುವಜನತೆ, ಮಕ್ಕಳ ಮೇಲೆ ಘೋರ ಪರಿಣಾಮ ಬೀರುತ್ತಿವೆ. ಹೀಗಾಗಿ ಈ ವಿಡಿಯೋ ಹಂಚಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಲಾಗಿದೆ.

ಇನ್ನು ವಿಡಿಯೋ ತಮ್ಮ ಬಳಿ ಇದೆ ಎಂದ ಹೇಳಿದ ರಾಜಕೀಯ ನಾಯಕ ಮತ್ತು ಕಾರು ಚಾಲಕ ಕಾರ್ತಿಕ್ ಗೌಡ ವಿರುದ್ಧ ಸಂಚು ರೂಪಿಸಿದ್ದಕ್ಕೆ ಪ್ರಕರಣ ದಾಖಲಿಸಬೇಕು. ವಿಡಿಯೋ ಕುರಿತು ಮಾಹಿತಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡದವರನ್ನು ಸಂಚಿನ ಭಾಗ ಎಂದು ಪರಿಗಣಿಸಬೇಕು. ವಿಡಿಯೋ ಹಳೆಯದು ಎಂದು ಎಚ್.ಡಿ.ರೇವಣ್ಣ ಹೇಳಿದ್ದಾರೆ. 

ಅಷ್ಟು ವರ್ಷ ನಡೆಯುತ್ತಿರುವ ಲೈಂಗಿಕ ವಿಕೃತಿ ಮುಂದುವರೆಯಲು ಬಿಟ್ಟಿರುವ ಕುಟುಂಬ ಸದಸ್ಯರ ವಿರುದ್ಧವೂ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದ್ದಾರೆ.ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು:ಆರೋಪಿ ದೇಶ ಬಿಟ್ಟು ಹೋಗಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಎಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್.ಡಿ.ರೇವಣ್ಣ ಅವರ ವಿಧಾನಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Share this article