ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಪರಿಸ್ಥಿತಿಯನ್ನು ಅರಿಯಲು ಆಗಮಿಸಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಅರ್ಧ ದಿನ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮುಕ್ಕಾಲು ಗಂಟೆ ಸಭೆ ಕೈಗೊಂಡು ಹೊರಟು ಹೋದ ಘಟನೆಯು ಬಂದಪುಟ್ಟ ಹೋದಪುಟ್ಟ ! ಎನ್ನುವ ಮಾತನ್ನು ಮೆಲಕುಹಾಕುವಂತೆ ಮಾಡಿತು.
5 ತಾಸು 5 ತಾಲೂಕು ರೌಂಡಪ್, 50 ನಿಮಿಷ ಸಭೆ: ಶುಕ್ರವಾರ ಬೆಳಗ್ಗೆ ಕಲಬುರಗಿಯಿಂದ ಆಗಮಿಸಿದ ಸಚಿವರು 5 ಗಂಟೆಯಲ್ಲಿ 5 (ಲಿಂಗಸುಗೂರು, ಮಸ್ಕಿ, ಸಿಂಧನೂರು,ಮಾನ್ವಿ ಮತ್ತು ರಾಯಚೂರು) ತಾಲೂಕುಗಳನ್ನು ರೌಂಡಪ್ ಮಾಡಿ ನಂತರ ಜಿಲ್ಲಾಡಳಿತ ಭವನದಲ್ಲಿ ಕೇವಲ 50 ನಿಮಿಷ ಸಭೆ ನಡೆಸಿದರು. ಶುಕ್ರವಾರ ಬೆಳಗ್ಗೆ 9 ರ ವೇಳೆಗೆ ಲಿಂಗಸುಗೂರು ಪ್ರವೇಶಿಸಿ ಸಚಿವರು ಜಿಲ್ಲೆ ಲಿಂಗಸುಗೂರ ತಾಲೂಕಿನ ಗುರಗುಂಟಾ, ಯರಡೋಣದಲ್ಲಿ, ಮಸ್ಕಿಯ ಸಂತೆಕೆಲ್ಲೂರು, ಸಿಂಧನೂರಿನ ರಾಮತ್ನಾಳ, ಮಾನ್ವಿಯ ಹಿರೇಕೋಟ್ನೆಕಲ್, ನೀರಮಾನ್ವಿಯ ಹಾಗೂ ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಳಾದ ತೊಗರಿ, ಹತ್ತಿ ಬೆಳೆಯ ಮಾಹಿತಿ ಪಡೆದುಕೊಂಡರು. ಇದೇ ವೇಳೆ ರೈತರಾದ ಮುದುಕಪ್ಪಗೌಡ ವಟಗಲ್, ನೀರಮಾನ್ವಿಯ ರೈತ ಮಹೇಶ ನಾಗಸಾಯಿ ಅವರ ಜಮೀನಿಗೆ ತೆರಳಿ ಹಾಳಾದ ಹತ್ತಿ ಬೆಳೆಯ ವೀಕ್ಷಿಸಿದರು. ಮಧ್ಯಾಹ್ನ ರಾಯಚೂರು ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅತಿವೃಷ್ಠಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಧ್ಯಾಹ್ನ 4 ಗಂಟೆಯ ವೇಳೆಗೆ ಹೊರಟು ಹೋದರು.ಸಚಿವರ ಈ ಅವಸರದ ಭೇಟಿ, ಕಾಟಾಚಾರದ ಪರಿಶೀಲನೆ, ಸಲಹೆ ಸೂಚನೆಗೆ ಸೀಮಿತಗೊಂಡ ಸಭೆಯು ಪ್ರತಿಪಕ್ಷದವರ, ರೈತರ ಹಾಗೂ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಕಾಟಾಚಾರದ ವೀಕ್ಷಣೆ: ಪ್ರತಾಪಗೌಡಮಸ್ಕಿ: ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಕಾಲಿಕ ಮಳೆಗೆ ಬೆಳೆಗಳು ಹಾನಿಯಾಗಿದ್ದು, ಜಿಲ್ಲಾ ಉಸ್ತುವಾರಿ ಕಾಟಾಚಾರಕ್ಕೆ ಬೆಳೆಹಾನಿ ವೀಕ್ಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಗುರುವಾರ ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಅತಿವೃಷ್ಠಿಯಿಂದ ಹಾಳಾದ ಬೆಳೆ ಹಾನಿ ಸಮೀಕ್ಷೆ ನಡೆಸಿದ್ದಾರೆ. ಮೂರು ಗಂಟೆಯಲ್ಲಿ ಐದು ತಾಲೂಕಿನಲ್ಲಿ ಪ್ರವಾಸ ಮಾಡಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೇವಲ ಮೂರು ಗಂಟೆಗಳಲ್ಲಿ ಲಿಂಗಸುಗೂರು, ಮಸಕಿ, ಸಿಂಧನೂರು ಮತ್ತು ಮಾನ್ವಿ ತಾಲೂಕಿನಲ್ಲಿ ಬೆಳೆ ವೀಕ್ಷಣೆ ಮಾಡಿರುವುದೇ ಪ್ರಶ್ನೆಯಾಗಿದೆ.ರೋಡ್ನಲ್ಲೇ ನಿಂತ ಸಚಿವರು: ಕಳೆದ 10-15 ದಿನಗಳಿಂದ ಸತತವಾಗಿ ಮಳೆಯಾಗಿದ್ದರಿಂದ ತೋಗರಿ, ಸಜ್ಜಿ, ಹತ್ತಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಬೆಳೆಗಳು ಹಾಳಾಗಿವೆ. ಇತ್ತ ಭತ್ತದ ಗದ್ದೆಗಳಿಗೆ ವೈರಸ್ ಬಂದು ಗದ್ದೆಗಳು ಹಾನಿಯಾಗಿದೆ. ಸಚಿವರು ಭತ್ತದ ಹೊಲಗಳಿಗೆ ತೆರಳದೇ ರೋಡ್ ಮೇಲೆ ನಿಂತುಕೊಂಡು ಹೋಗಿದ್ದಾರೆಂದು ಆರೋಪಿಸಿದರು. ಕೂಡಲೇ ರಾಜ್ಯ ಸರಕಾರ ರೈತರ ಖಾತೆಗಳಿಗೆ ಹಣವನ್ನು ಜಾಮ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.