ಕನ್ನಡಪ್ರಭ ವಾರ್ತೆ ವಿರಾಜಪೇಟೆ
ನಾಲ್ಕು ವಾರಗಳ ಕಾಲ ಜರುಗಿದ ಈ ಶಿಬಿರಕ್ಕೆ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಪೂಜಾ ಸಜೇಶ್ ಚಾಲನೆ ನೀಡಿದರು.
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸೃಜನಾತ್ಮಕ ಕಲಿಕೆಯ ಜೊತೆಗೆ ಮನರಂಜನೆಯನ್ನು ಒದಗಿಸಲಾಯಿತು. ಕಲೆ, ಕ್ರೀಡೆ ಹಾಗೂ ವಿಜ್ಞಾನದ ಕುರಿತಾದ ಚಟುವಟಿಕೆಗಳ ಕುರಿತು ಪರಿಚಯಿಸಲಾಯಿತು.ಮಕ್ಕಳಿಗೆ ಕಾರ್ಡ್ ಬೋರ್ಡ್ ಕ್ರಿಯೇಷನ್, ಡೂಡಲ್ ಆರ್ಟ್, ಸ್ಕ್ರಿಬಲ್ ಆರ್ಟ್, ಬಾಟಲ್ ಪೇಂಟಿಂಗ್, ಅಡುಗೆ ತಯಾರಿಸುವ ವಿಧಾನಗಳು, ಪರಿಸರ ವಿಜ್ಞಾನ, ಆಡಿಯೋ ವಿಜುವಲ್ ಕಮ್ಯುನಿಕೇಶನ್, ರೊಬೊಟಿಕ್ಸ್ ಮುಂತಾದ ವಿಷಯದ ಕುರಿತು ತರಬೇತಿಯನ್ನು ನೀಡಲಾಯಿತು. ಮಕ್ಕಳು ಕೂಡ ತಮ್ಮ ಕೈ ಚಳಕದಿಂದ ಅನೇಕ ಸುಂದರ ಕಲಾಕೃತಿಗಳನ್ನು ತಯಾರಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿ ಪರಸ್ಪರ ಸ್ನೇಹ, ಸಹಕಾರ ಹಾಗೂ ತಂಡದ ನಾಯಕತ್ವದ ಮನೋಭಾವವನ್ನು ಬೆಳೆಸಿಕೊಂಡರು. ಶಿಬಿರದ ಎಲ್ಲಾ ತರಬೇತಿಗಳಲ್ಲಿ ಮಕ್ಕಳು ಸಂತಸದಿಂದ ಪಾಲ್ಗೊಂಡು ತುಂಬಾ ಆಸಕ್ತಿಯಿಂದ ವಿವಿಧ ವಿಚಾರಗಳನ್ನು ಅರಿತರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಪೂಜಾ ಸಜೇಶ್ ರವರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಸೃಜನಾತ್ಮಕ ಕಲಿಕೆಗೆ ಇಂತಹ ಶಿಬಿರಗಳು ಉಪಯುಕ್ತವಾಗಿದ್ದು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದಲ್ಲದೆ ಜ್ಞಾನ ಹಾಗೂ ಜೀವನ ಕೌಶಲ್ಯವನ್ನು ಕಲಿಸುತ್ತದೆ. ಪೋಷಕರು ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಲ್ಲಿ ಅವರ ಕಲಿಕೆಯು ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದರು. ಸ್ಲ್ಯಾಶ್ ಅಂಡ್ ಸ್ಪಾರ್ಕ್ 2026 ರ ಮಕ್ಕಳ ಬೇಸಿಗೆ ಶಿಬಿರವು ವಿನೂತನ ಕಲಿಕೆಗಳೊಂದಿಗೆ ಯಶಸ್ವಿಯಾಗಿ ಜರುಗಿದೆ ಎಂದರು.