ಇಂದು ಜೀವಂತ ಕೋಳಿ ತೂರುವ ರಥೋತ್ಸವ

KannadaprabhaNewsNetwork |  
Published : May 11, 2025, 11:56 PM IST
ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿಯ ರಥೋತ್ಸವ ನಡೆಯುವ ಪ್ರತಿ ವರ್ಷ ಭಕ್ತರು ಜೀವಂತ ಕೋಳಿಗಳನ್ನು ತೂರಿ ಭಕ್ತಿ ಸಮರ್ಪಿಸುತ್ತಾರೆ. | Kannada Prabha

ಸಾರಾಂಶ

ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೊಂದು ವಿಶಿಷ್ಟತೆಯಿಂದಾಗಿ ಸುಕ್ಷೇತ್ರ ಕೊಟ್ಟೂರು ಪ್ರಖ್ಯಾತಿಗೊಂಡಿದೆ.

ಅಹಿಂಸೆ ಪ್ರತಿಪಾದಿಸುವ ರಥೋತ್ಸವ । ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿರುವ ಪರಂಪರೆ

ಜಿ.ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೊಂದು ವಿಶಿಷ್ಟತೆಯಿಂದಾಗಿ ಸುಕ್ಷೇತ್ರ ಕೊಟ್ಟೂರು ಪ್ರಖ್ಯಾತಿಗೊಂಡಿದೆ. ಅಗಿ ಹುಣ್ಣಿಮೆಯ ದಿನವಾದ ಮೇ 12ರಂದು ಮತ್ತೊಮ್ಮೆ ವೈಶಿಷ್ಟತೆಗೆ ಸಾಕ್ಷಿಯಾಗಲಿದೆ. ಬುದ್ಧ ಪೂರ್ಣಿಮ ದಿನವೂ ಆಗಿರುವ ಅಗಿ ಹುಣ್ಣಿಮೆ ದಿನದಂದು ಅಹಿಂಸೆಯನ್ನು ಪ್ರತಿಪಾದಿಸುವ ರಥೋತ್ಸವ ಇದಾಗಿದೆ.

ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ವೈಶಿಷ್ಟ್ಯವುಳ್ಳ ರಥೋತ್ಸವವಾಗಿದೆ. ಪ್ರತೀ ವರ್ಷದ ಸಂಪ್ರದಾಯದಂತೆ ಅಗಿ ಹುಣ್ಣಿಮೆಯ ದಿನದಂದು ನಡೆಯುವ ಪಟ್ಟಣದ ಬಿಕ್ಕಿ ಮರಡಿ ದುರುಗಮ್ಮ ದೇವಿ ರಥೋತ್ಸವದಲ್ಲಿ ಭಕ್ತರು ಜೀವಂತ ಕೋಳಿಗಳನ್ನು ತೂರಿ ದೇವಿಯನ್ನು ಸಂತೃಪ್ತಪಡಿಸುವ ಪರಂಪರೆಯನ್ನು ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ರಥೋತ್ಸವಕ್ಕೆ ಎಲ್ಲೆಡೆ ಬಾಳೆಹಣ್ಣು ಉತ್ತತ್ತಿಗಳನ್ನು ತೂರುವುದು ಕಾಣಬಹುದಾಗಿದ್ದರೆ ಐತಿಹಾಸಿಕ ಮತ್ತು ಧಾರ್ಮಿಕ ಪ್ರಸಿದ್ಥ ಕೊಟ್ಟೂರಿನಲ್ಲಿ ಇಂತಹ ವಿಶಿಷ್ಟ ಸಂಪ್ರದಾಯ ಈಗಲೂ ನಡೆದುಕೊಂದು ಬರುತ್ತಿದೆಯಲ್ಲದೇ ದೇವಿ ಜಾತ್ರೆಗಳಲ್ಲಿ ಕುರಿ, ಕೋಳಿ, ಬಲಿಕೊಡುವುದು ಸಾಮಾನ್ಯ. ಆದರೆ ಕೊಟ್ಟೂರಿನಲ್ಲಿ ಪ್ರಾಣಿಬಲಿಯಂತಹ ಹಿಂಸೆ ನಡೆಯದೇ ಜೀವಂತ ಕೋಳಿಗಳನ್ನೇ ರಥಕ್ಕೆ ತೂರಲಾಗುತ್ತದೆ.

ಪ್ರತೀ ವರ್ಷದ ಈ ದಿನದಂದು ಜರುಗುವ ಬಿಕ್ಕಿ ಮರಡಿ ದುರುಗಮ್ಮ ರಥೋತ್ಸವದಲ್ಲಿ ತೂರುವ ಕೋಳಿಗಳನ್ನು ಸಿಕ್ಕವರು ಖಂಡಿತಾ ಹತ್ಯೆ ಗೈಯ್ಯುವುದಿಲ್ಲ. ಬದಲಾಗಿ ಮನೆಗೊಯ್ದು ಸಾಕಿ ಸಲುಹಿ ಮತ್ತೇ ಮುಂದಿನ ವರ್ಷಕ್ಕೆ ಜರುಗುವ ರಥೋತ್ಸವಕ್ಕೆ ಈ ಕೋಳಿಗಳನ್ನು ತೂರುತ್ತಾ ಬರುತ್ತಾರೆ.

ಮೇ 12ರಂದು ನಡೆಯಲಿರುವ ಈ ರಥೋತ್ಸವದ ಸಂಭ್ರಮ ಪಟ್ಟಣದ ಪ್ರತೀ ಮನೆಯಲ್ಲಿ ಕಾಣಬಹುದಾಗಿದ್ದು ಸಿಹಿ ಪದಾರ್ಥಗಳನ್ನು ಅಡುಗೆ ಮಾಡಿ ದೇವಿಗೆ ನೈವೇದ್ಯ ಅರ್ಪಿಸುತ್ತಾರೆ.ಇಲ್ಲಿದೆ:

ಕೊಟ್ಟೂರಿನ ಕೆರೆಯ ದಿಬ್ಬದ ಮೇಲೆ ಈ ಬಿಕ್ಕಿ ಮರಡಿ ದುರುಗಮ್ಮ ದೇವಿಯ ಗುಡಿ ಇದೆ. ಗುಡಿಯ ಹಿಂಭಾಗದಲ್ಲಿನ ಹೊಲ ಪ್ರದೇಶಗಳಲ್ಲಿ ರಥೋತ್ಸವ ನಡೆಯುತ್ತದೆ. ಕೊಟ್ಟೂರು ಮತ್ತು ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡು ದುರುಗಮ್ಮದೇವಿಯ ರಥಕ್ಕೆ ಚಾಲನೆ ದೊರಕುತ್ತಿದ್ದಂತೆ ಹರಕೆ ಹೊತ್ತ ಭಕ್ತರು ರಥದ ಮೇಲೆ ಜೀವಂತ ಕೋಳಿ ತೂರುತ್ತಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ