ಬಂತು ತುರ್ತು ಕರೆ: ರಜೆ ಮೇಲೆ ಬಂದಿದ್ದ ಸೈನಿಕ ಮರಳಿ ಕರ್ತವ್ಯಕ್ಕೆ

KannadaprabhaNewsNetwork |  
Published : May 11, 2025, 11:56 PM ISTUpdated : May 12, 2025, 11:52 AM IST
11ಕೆಎಂಎನ್‌ಡಿ-5ದೇಶಸೇವೆಗೆ ತೆರಳಿದ ರಾಘವೇಂದ್ರ ಅವರಿಗೆ ಕುಟುಂಬಸ್ಥರು, ಸ್ಥಳೀಯರು ಅಭಿನಂದಿಸಿ ಬೀಳ್ಕೊಟ್ಟರು. | Kannada Prabha

ಸಾರಾಂಶ

ಮನೆಯ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದ ಸೈನಿಕ ರಾಘವೇಂದ್ರ ರಕ್ಷಣಾ ಇಲಾಖೆ ಸೈನ್ಯಾಧಿಕಾರಿಗಳ ತುರ್ತು ಕರೆ ಮೇರೆಗೆ ಭಾನುವಾರ ಕರ್ತವ್ಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಅಭಿನಂದಿಸಿ, ಶುಭ ಹಾರೈಸಿ ಕಳುಹಿಸಿಕೊಟ್ಟರು.

 ಮಂಡ್ಯ : ಮನೆಯ ಗೃಹ ಪ್ರವೇಶದ ಹಿನ್ನೆಲೆಯಲ್ಲಿ ರಜೆ ಮೇಲೆ ಬಂದಿದ್ದ ಸೈನಿಕ ರಾಘವೇಂದ್ರ ರಕ್ಷಣಾ ಇಲಾಖೆ ಸೈನ್ಯಾಧಿಕಾರಿಗಳ ತುರ್ತು ಕರೆ ಮೇರೆಗೆ ಭಾನುವಾರ ಕರ್ತವ್ಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಅಭಿನಂದಿಸಿ, ಶುಭ ಹಾರೈಸಿ ಕಳುಹಿಸಿಕೊಟ್ಟರು.

ಮೂಲತಃ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ಸುಬ್ಬೇಗೌಡ ಹಾಗೂ ನಿಂಗಮ್ಮ ದಂಪತಿ ಎರಡನೇ ಮಗ ರಾಘವೇಂದ್ರ ೧೬ ಮಾರ್ಚ್ ೨೦೧೧ರಲ್ಲಿ ಗುಜರಾತ್‌ನ ಗಾಂಧಿ ಧಾಮ್‌ನಲ್ಲಿ ಮೊದಲು ಕರ್ತವ್ಯ ನಿರ್ವಹಿಸಿದ್ದರು. ನಂತರ ಇವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಂಡ್ಯ ನಗರದ ಮಹಾರಾಜ ನಗರ ಬಡಾವಣೆಯಲ್ಲಿ ಮೇ ೩೦ರಂದು ನೂತನ ಮನೆ ಗೃಹಪ್ರವೇಶವಿದ್ದುದರಿಂದ ರಾಘವೇಂದ್ರ ಮೇ ೧೨ರವರೆಗೂ ರಜೆ ಹಾಕಿ ಬಂದಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಕದನ ತಾರಕಕ್ಕೇರುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ತಿಕೆ ವಹಿಸಿ ಕದನ ವಿರಾಮ ಘೋಷಿಸಿದ್ದರು. ಆದರೂ, ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿ ಬಳಿಕವೂ ರಾತ್ರಿ ಮತ್ತೆ ಅಪ್ರಚೋದಿತ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಸೂಚನೆ ಮೇರೆಗೆ ರಜೆ ಮೇಲೆ ತೆರಳಿದ್ದ ಸೈನಿಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ರಕ್ಷಣಾ ಇಲಾಖೆಯ ಅಧಿಕಾರಿ ಕಚೇರಿಯಿಂದ ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಮರಳಿದರು.

ಜಮ್ಮು ಕಾಶ್ಮೀರದ ಗಡಿ ಭಾಗ ಲಡಾಕ್‌ಗೆ ರಾಘವೇಂದ್ರ ಅವರನ್ನು ನಿಯೋಜಿಸಿದ್ದು, ಕರ್ತವ್ಯಕ್ಕೆ ತೆರಳಿದರು. ಕುಟುಂಬಸ್ಥರು ಹಾಗೂ ಬಡಾವಣೆಯ ನಿವಾಸಿಗಳು ಹೃದಯಪೂರ್ವಕವಾಗಿ ಶುಭ ಹಾರೈಸಿ ಅಭಿನಂದಿಸಿ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಬಡಾವಣೆ ಮುಖಂಡರಾದ ಅಶೋಕ್, ಗೋವಿಂದರಾಜು, ಕೃಷ್ಣಪ್ಪ, ರಾಮಲಿಂಗಯ್ಯ, ಮಹದೇವಸ್ವಾಮಿ, ನಟರಾಜು, ಕುಮಾರ್, ಕೆಂಪರಾಜು, ವೆಂಕಟರಾಮು, ರಾಘು, ಕಿರಣ್, ಲತಾ, ಸುನೀತಾ ಹಾಗೂ ಕುಟುಂಬದ ಸದಸ್ಯರು ಇದ್ದರು.

ಸೇನೆಯ ರಕ್ಷಣೆಗಾಗಿ ಇಂದು ಸುದರ್ಶನ ಮಹಾಯಾಗ

ಮಂಡ್ಯ: ನಗರದ ಶ್ರೀಕಾಳಿಕಾಂಬ ದೇವಸ್ಥಾನದ ಮುಂಭಾಗವಿರುವ ಶ್ರೀಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಮೇ 12ರಂದು ಸಂಜೆ 5 ಗಂಟೆಗೆ ಭಾರತೀಯ ಸೇನೆಯ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಅರ್ಜುನ್ ಎಸ್.ರಾವ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾಡಳಿತ ಹಾಗೂ ಮಂಡ್ಯ ಜಿಲ್ಲಾ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಶ್ರೀಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್, ಜಿಲ್ಲಾ ನಾಯಕ ಸಮಾಜ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಷನ್ ಇವರ ಸಹಯೋಗದಲ್ಲಿ ಭಾರತಿಯ ಸೇನೆಯ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ಮತ್ತು ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7.30ಕ್ಕೆ ಮಹಾಪೂರ್ಣಾಹುತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ. 

ಆಪರೇಷನ್ ಸಿಂದೂರ ಕುರಿತು ಸಾರ್ವಜನಿಕರ ಅಭಿಪ್ರಾಯಗಳು...

ಆಪರೇಷನ್ ಸಿಂದೂರದಲ್ಲಿ ಪಾಲ್ಗೊಂಡ ಭಾರತೀಯ ಸೈನಿಕರಿಗೆ ಮಾಜಿ ಸೈನಿಕನಾಗಿ ಕೃತಜ್ಞತೆ ಮತ್ತು ಅಭಿನಂದನೆ ತಿಳಿಸುತ್ತೇನೆ. ಪಹಾಲ್ಗಂ ದಾಳಿ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ ಮೂಲಕ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಯಾವುದೇ ರೀತಿಯ ಭಯೋತ್ಪಾದನೆ ಚಟುವಟಿಕೆ ನಡೆಸಿದರೆ ಅದನ್ನು ನಿರ್ನಾಮ ಮಾಡುತ್ತೇವೆ. ನುಗ್ಗಿ ಒಡೆಯುತ್ತೇವೆ ಎನ್ನುವ ಸಂದೇಶವನ್ನು ನಮ್ಮ ಸೇನೆ ನೀಡಿದೆ. ದೇಶದ ರಕ್ಷಣೆಗಾಗಿ ತಾಯಿ ನಾಡು ಭಾರತ ಮಾತೇ ರಕ್ಷಣೆಗೆ ಯುದ್ಧವಾದಲ್ಲಿ ಹೋರಾಡಲು ನಾನು ಒಬ್ಬ ಮಾಜಿ ಸೈನಿಕನಾಗಿ ಸದಾ ಸಿದ್ಧವಾಗಿರುವೆ.

-ಎ.ಎಂ.ರಾಜೇಶ್, ಮಾಜಿ ಸೈನಿಕ (ಪೊಲೀಸ್ ಇಲಾಖೆ) ಆಲದಹಳ್ಳಿ ಗ್ರಾಮ.

ಭಾರತ ಶಾಂತಿ ಪ್ರಿಯ ದೇಶ. ನಮ್ಮ ದೇಶದ ಬಗ್ಗೆ ತುಂಬಾ ಗೌರವ ಮತ್ತು ಖುಷಿ ಇದೆ. ಜಗತ್ತಿನಲ್ಲೂ ಭಾರತದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಆದರೆ, ಪಕ್ಕದ ಪಾಕಿಸ್ತಾನ ಭಯೋತ್ಪಾದನೆ ಮೂಲಕ ದೇಶದ ಶಾಂತಿ ಕದಡಲು ಯತ್ನಿಸುತ್ತಿದೆ. ಇದಕ್ಕೆ ಪಾಠ ಕಲಿಸಲು ಭಾರತೀಯ ಸೈನಿಕರು ನಡೆಸುತ್ತಿರುವ ಆಪರೇಷನ್ ಸಿಂದೂರಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ದೇಶ, ಪ್ರತಿಯೊಬ್ಬರ ಆತ್ಮ ರಕ್ಷಣೆಗೆ ಯುದ್ಧ ಅನಿವಾರ್ಯ. ನಮ್ಮನ್ನು ಪದೇ ಪದೇ ಕೆಣಕುತ್ತಿರುವ ಪಾಪಿಸ್ತಾನ್ ಗೆ ತಕ್ಕಪಾಠ ಕಲಿಸಬೇಕು.

-ಹರ್ಷಿತಾ, ದ್ವಿತೀಯ ಪಿಯುಸಿ, ಸದ್ವಿದ್ಯಾ ಕಾಲೇಜು, ಮಂಡ್ಯ

ಆಪರೇಷನ್ ಸಿಂದೂರದ ಮೂಲಕ ಭಾರತೀಯ ಸೇನೆ ವಿಶ್ವದ ಮುಂದೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಯಾವುದೇ ನಾಗರೀಕ ಪ್ರದೇಶದ ಮೇಲೆ ದಾಳಿ ಮಾಡದೆ ಪಾಕಿಸ್ತಾನದ ಒಳಗೆ ಇರುವ ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಭಾರತ ತಾನೊಂದು ಜವಾಬ್ದಾರಿಯುತ ರಾಷ್ಟ್ರ ಎನ್ನುವುದನ್ನು ಜಗತ್ತಿಗೆ ತೋರಿಸಿದೆ. ಪಾಕಿಸ್ತಾನವನ್ನು ಧೂಳೀಪಟ ಮಾಡುವ ಶಕ್ತಿಯಿದ್ದರೂ ಭಾರತ ಯಾವುದೇ ಉನ್ಮಾದಕ್ಕೆ ಒಳಗಾಗದೆ ಶತ್ರುವಿನ ದಾಳಿಗೆ ಪ್ರತಿದಾಳಿ ನಡೆಸಿ ತನ್ನ ಪ್ರಾಬಲ್ಯವನ್ನು ತೋರಿಸಿದೆ.

- ಬೂಕನಕೆರೆ ವಿಜಯ ರಾಮೇಗೌಡ, ಮಿತ್ರ ಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡರು

ಪಹಲ್ಗಾಂ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟು ತೀವ್ರಗೊಂಡಿದೆ. ಪಾಕಿಸ್ತಾನ ಮೊದಲಿನಿಂದಲೂ ಭಯೋತ್ಪಾದನೆಗೆ ಬೆಂಬಲ ಕೊಡುತ್ತಾ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿತ್ತು. ಪ್ರತೀಕಾರದ ರೂಪದಲ್ಲಿ ಭಾರತ ಪ್ರತಿ ದಾಳಿ ನಡೆಸಿದೆ. ಆಪರೇಷನ್ ಸಿಂದೂರದ ಮೂಲಕ ಭಾರತದ ದೈತ್ಯ ಮಿಲಿಟರಿ ಶಕ್ತಿ ಜಗತ್ತಿಗೆ ಗೋಚರಿಸಿದೆ.

- ಡಾ.ಜೆ.ಎನ್.ರಾಮಕೃಷ್ಣೇಗೌಡ, ಕಾರ್ಯದರ್ಶಿ, ಬಿಜಿಎಸ್ ಎಜುಕೇಷನ್ ಸೆಂಟರ್, ಹೇಮಗಿರಿ ಶಾಖೆ

ಭಾರತದ ಮೇಲೆ ಪಾಕಿಸ್ತಾನ ಭಯೋತ್ಪಾದನೆ ಮೂಲಕ ತೊಂದರೆ ನೀಡುತ್ತಲೇ ಬಂದಿದೆ. ಭಾರತೀಯ ಸೇನೆ ಉಗ್ರಗಾಮಿಗಳನ್ನು ಸಂಹರಿಸುತ್ತಿರುದು ಶ್ಲಾಘನೀಯ. ಅದೇ ರೀತಿ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ದೇಶದ ಸೈನಿಕರು ಹೋರಾಟ ಮಾಡಬೇಕು.

-ಯತೀಶ್, ಕೆ.ಶೆಟ್ಟಹಳ್ಳಿ ಗ್ರಾಮ‌. ಶ್ರೀರಂಗಪಟ್ಟಣ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ!
ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಭರದ ಸಿದ್ಧತೆ