ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಮಾಕ್‌ಡ್ರಿಲ್ ನಡೆಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಗರಿಕ ಸುರಕ್ಷತಾ ತಾಲೀಮು ನಡೆಸುವ ಮೂಲಕ ತುರ್ತು ಪರಿಸ್ಥಿತಿ ಎದುರಾದ ವೇಳೆ ಸಾರ್ವಜನಿಕರು ಹೇಗೆ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕದಳ, ಗೃಹರಕ್ಷಕದಳ, ಟ್ರಾಫಿಕ್, ಎನ್.ಸಿ.ಸಿ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಮಾಕ್‌ಡ್ರಿಲ್ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು ಮಾಕ್‌ಡ್ರಿಲ್ ಅಗತ್ಯವಾದ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಯಾವುದೇ ರೀತಿಯಲ್ಲಿ ಯಾರಿಗೂ ಅಪಾಯವಾಗದಂತೆ ಎಚ್ಚರಿಕೆ ಕ್ರಮ ಕೈಗೊಂಡು ಮಾಕ್‌ಡ್ರಿಲ್ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೂಕ್ತ ಜಾಗ ನಿಗದಿಪಡಿಸಿಕೊಂಡು ಅಗತ್ಯವಾದ ಮಾನವ ಸಂಪನ್ಮೂಲ, ಸೈರನ್, ಕಂಟ್ರೋಲ್ ರೂಂ, ಆಂಬುಲೆನ್ಸ್, ಅಗ್ನಿಶಾಮಕ ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.ಸಂಕಷ್ಟ ಪರಿಸ್ಥಿತಿಯಲ್ಲಿ ವ್ಯವಸ್ಥೆ ನಮ್ಮ ರಕ್ಷಣೆಗೆ ಧಾವಿಸಲಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡುವಂತೆ ಯಶಸ್ವಿಯಾಗಿ ಮಾಕ್‌ಡ್ರಿಲ್ ನಡೆಸಲು ತಿಳಿಸಿದರು. ಮಾಕ್‌ಡ್ರಿಲ್ ನಲ್ಲಿ ಸೈರನ್ ಹಾಕುವ ಮೂಲಕ ಜನರು ಸುರಕ್ಷಿತ ಸ್ಥಳಕ್ಕೆ ಧಾವಿಸುವುದು, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗುವುದು, ಬೆಂಕಿ ನಂದಿಸುವುದು, ಕಟ್ಟಡ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿ, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸುವುದು ಹೀಗೆ ಹತ್ತು ಹಲವು ಕಾರ್ಯಾಚರಣೆಯ ಅಣಕು ಪ್ರದರ್ಶನ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.