ಜ.17ರಿಂದ ಜಾನುವಾರು, ಕುಕ್ಕುಟ, ಮೀನುಗಾರಿಕೆ ಮೇಳ

KannadaprabhaNewsNetwork |  
Published : Dec 27, 2024, 12:46 AM IST
ಚಿತ್ರ 25ಬಿಡಿಆರ್57ಎ | Kannada Prabha

ಸಾರಾಂಶ

ಪಶು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಶೇಷ ಜಾನುವಾರು ಮೇಳ ಆಯೋಜಿಸಲಾಗಿದ್ದು, ಯಶಸ್ಸಿಗೆ ಜಿಲ್ಲೆಯ ವಿವಿಧ ಗಣ್ಯರ ಸಭೆ ಮಂಗಳವಾರ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು.

ಮೇಳ ಯಶಸ್ಸಿಗೆ ಕುಲಪತಿ ಪ್ರೊ.ವೀರಣ್ಣ ಅಧ್ಯಕ್ಷತೆಯಲ್ಲಿ ಗಣ್ಯರ ಸಭೆಕನ್ನಡಪ್ರಭ ವಾರ್ತೆ ಬೀದರ್

ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಶೇಷ ಜಾನುವಾರು ಮೇಳ ಆಯೋಜಿಸಲಾಗಿದ್ದು, ಯಶಸ್ಸಿಗೆ ಜಿಲ್ಲೆಯ ವಿವಿಧ ಗಣ್ಯರ ಸಭೆ ಮಂಗಳವಾರ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು.

ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ ಕುಲಪತಿ ಪ್ರೊ.ಕೆ.ವೀರಣ್ಣ ಮಾತನಾಡಿ, ಜ.17ರಿಂದ 19ರವರೆಗೆ ಬೀದರ್‌ನ ನಂದಿನಿ ನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ‘ಜಾನುವಾರು, ಕುಕ್ಕುಟ ಮತ್ತು ಮೀನುಗಾರಿಕೆ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮೇಳದಲ್ಲಿ ಶ್ವಾನ ಪ್ರದರ್ಶನ, ವಿಧೇಯತೆ ಪರೀಕ್ಷೆ, ಸಣ್ಣ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ, ಜಾನುವಾರು ತಳಿಗಳ ಪ್ರದರ್ಶನ, ಅಲಂಕಾರಿಕ ಮೀನುಗಳ ಪ್ರದರ್ಶನ, ಮೌಲ್ಯಧಾರಿತ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನ, ಕುರಿ, ಆಡು ಮುಂತಾದ ಪ್ರಾಣಿಗಳ ವೈವಿಧ್ಯಮಯ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿವೆ.

ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ರೈತರು ಮತ್ತು ಸಾಕುಪ್ರಾಣಿಗಳ ಪ್ರೇಮಿಗಳು ಈ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಮೇಳವು ಪಶುಪಾಲನೆ, ಮೀನುಗಾರಿಕೆ ಮತ್ತು ಸಾವಯವ ಕೃಷಿಯ ಉನ್ನತ ತಂತ್ರಜ್ಞಾನಗಳನ್ನು ಪರಿಚಯಿಸಿ, ಆರ್ಥಿಕ ಪ್ರಗತಿಗೆ ಪಥ ಪ್ರದರ್ಶನ ಮಾಡುವ ಉದ್ದೇಶ ಹೊಂದಿದೆ ಎಂದರು.

ಈ ಮೇಳವು ರೈತರಿಗೆ ನವೀನ ತಂತ್ರಜ್ಞಾನಗಳನ್ನು ಪರಿಚಯಿಸುವುದಲ್ಲದೆ, ಪಶುಪಾಲನೆ, ಕುಕ್ಕುಟ ಮತ್ತು ಮೀನುಗಾರಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಪ್ರೇರಣೆಯಾಗಲಿದೆ ಎಂದು ಕುಲಪತಿ ಪ್ರೊ.ಕೆ.ವೀರಣ್ಣ ಹೇಳಿದರು.ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ ಮಾತನಾಡಿ, ಈ ಮೇಳವು ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜನೆಯಾಗಿದ್ದು, ಪ್ರತಿ ಕ್ಷೇತ್ರದ ಗಣ್ಯರಿಂದ ಯಶಸ್ಸಿಗೆ ಅಗತ್ಯ ಸಹಕಾರ ಕೋರಲಾಗಿದೆ ಎಂದರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ್ ಬತಮುರ್ಗೆ ಮಾತನಾಡಿ, ಬೀದರ್ ನಗರದ ಗಣ್ಯರು ಸಹಕಾರ ನೀಡಬೇಕೆಂದು ಕೇಳಿಕೊಂಡರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ವಿಶ್ವವಿದ್ಯಾಲಯಕ್ಕೆ ನಾಗರಿಕರ ಸಂಪೂರ್ಣ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷರಾದ ಡಾ.ಅಬ್ದುಲ್ ಖದೀರ್ ಮಾತನಾಡಿ, ಮೇಳಕ್ಕೆ ಬರುವ ಪ್ರತಿ ರೈತರಿಗೆ ಊಟದ ವ್ಯವಸ್ಥೆ ಮಾಡೋಣ. ಆ ಜವಾಬ್ದಾರಿಯನ್ನು ನಾವೆಲ್ಲರೂ ಕೂಡಿ ಹೊತ್ತುಕೊಳ್ಳೋಣ ಎಂದರು.

ಈ ವೇಳೆ ಯುವ ಮುಖಂಡ ವಿರುಪಾಕ್ಷ ಗಾದಗಿ ಮಾತನಾಡಿದರು. ಸಭೆಯಲ್ಲಿ ಮಂಗಲಾ ಭಾಗವತ್, ಖ್ಯಾತ ಕೋಳಿ ಆಹಾರ ಉದ್ಯಮಿ ಅಶೋಕ್ ರೆಜೆಂತಲ್, ಡಾ.ಗೌತಮ್ ಅರಳಿ, ಸುಬ್ರಮಣ್ಯ ಪ್ರಭು, ಬಿ.ಎಸ್. ಕುದ್ರೆ, ರವಿ ದೇಶಮುಖ್, ನಿವೃತ್ತ ಡೀನ್ ಸುರೇಶ್ ಪಾಟೀಲ್, ಹಾವಶೆಟ್ಟಿ ಪಾಟೀಲ್, ರವಿ ಮೂಲಗೆ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ