ಮೂಲಭೂತ ಸೌಕರ್ಯವಿಲ್ಲದೆ ನರಕಯಾತನೆ: ಪೊನ್ನತ್‌ಮೊಟ್ಟೆ ಬಡ ಕುಟುಂಬಗಳ ಗೋಳು

KannadaprabhaNewsNetwork |  
Published : Aug 24, 2026, 02:45 AM IST
ಗೋಳು | Kannada Prabha

ಸಾರಾಂಶ

ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಲ್ಲದೆ ಅನೇಕ ಬಡ ಕುಟುಂಬಗಳು ಪ್ರತಿದಿನ ಹೈರಾಣಾಗಿ ಬದುಕು ಸಾಗಿಸುತ್ತಿರುವ ಪ್ರಸಂಗ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಸಮೀಪದ ಪೊನ್ನತ್ ಮೊಟ್ಟೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಮಡಿಕೇರಿ : ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಲ್ಲದೆ ಅನೇಕ ಬಡ ಕುಟುಂಬಗಳು ಪ್ರತಿದಿನ ಹೈರಾಣಾಗಿ ಬದುಕು ಸಾಗಿಸುತ್ತಿರುವ ಪ್ರಸಂಗ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಸಮೀಪದ ಪೊನ್ನತ್ ಮೊಟ್ಟೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದಲ್ಲಿ ಸರ್ಕಾರದಿಂದ ಗುರುತಿಸಲ್ಪಟ್ಟ ನಿವೇಶನ ಜಾಗದಲ್ಲಿ ಟೆಂಟ್ ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿರುವ 29ಕ್ಕೂ ಅಧಿಕ ಬಡ ಕಾರ್ಮಿಕ ಕುಟುಂಬಗಳು ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿವೆ.‘ಕೆಲ ವರ್ಷಗಳ ಹಿಂದೆ ಕೇಂದ್ರ ತೋಟಗಾರಿಕಾ ಇಲಾಖೆ ಅಧೀನದಲ್ಲಿದ್ದ ಸರ್ಕಾರಿ ಜಾಗವನ್ನು ವಸತಿ ರಹಿತರಿಗಾಗಿ ಸರ್ಕಾರ ಗುರುತಿಸಿತ್ತು. ಆದರೆ ವರ್ಷಗಳಾದರೂ ಜಾಗ ಮಂಜೂರು ಮಾಡಲಿಲ್ಲ. ಹಾಗಾಗಿ ನಾವೇ ಒಗ್ಗೂಡಿ ಯಾರಿಗೂ ವಂಚನೆಯಾಗದ ರೀತಿಯಲ್ಲಿ ಸಮಪಾಲು ಮಾಡಿಕೊಂಡು ಟೆಂಟ್ ನಿರ್ಮಿಸಿಕೊಂಡಿದ್ದೇವೆ. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಉದ್ದೇಶದಿಂದ ಸ್ಥಳೀಯ ಪಂಚಾಯಿತಿ ವಿವಿಧ ರೀತಿಯಲ್ಲಿ ತೊಂದರೆ ನೀಡುತ್ತಿದೆ. ನಾವು ಇಲ್ಲಿ ನೆಲೆ ನಿಲ್ಲುವವರೆಗೂ ಇದ್ದ ಕುಡಿಯುವ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದೆ’ ಎಂದು ನಿವಾಸಿಗಳು ಆರೋಪಿಸಿದ್ದಾರೆ.‘ನಮ್ಮ ಮನೆಗಳ ಮೇಲೆ ಹಾದು ಹೋಗುವ ರೀತಿಯಲ್ಲಿ 11 ಕೆವಿ ವಿದ್ಯುತ್ ಲೈನ್ ಅಳವಡಿಸಲಾಗಿದೆ. ಪಕ್ಕದಲ್ಲೇ ರಾಶಿ ರಾಶಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಕುಡಿಯುವ ನೀರಿಲ್ಲದೆ ಕೆರೆ ನೀರನ್ನು ಅವಲಂಬಿಸಿರುವ ನಮಗೆ ತ್ಯಾಜ್ಯದಿಂದ ಸೊಳ್ಳೆ, ನೊಣಗಳ ಕಾಟ, ಜ್ವರ, ಕಜ್ಜಿ ಶುರುವಾಗಿದೆ. ಮಳೆ ಬಂದಾಗ ವಿಷಕಾರಿ ತ್ಯಾಜ್ಯ ಮಿಶ್ರಿತ ನೀರು ಕೆರೆ ಸೇರುತ್ತಿದೆ’ ಎಂದು ನಿವಾಸಿ ಸೌಕತ್ ಅಲಿ ಹಾಗೂ ಕಾರ್ಮಿಕ ಮಹಿಳೆ ಸುಮಿತ್ರಾ ಅಳಲು ತೋಡಿಕೊಂಡಿದ್ದಾರೆ.

ಹೋರಾಟಗಾರರ ಬೆಂಬಲ

ಸ್ಥಳಕ್ಕೆ ಭೇಟಿ ನೀಡಿದ್ದ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಮಾತನಾಡಿ, ‘ಇಲ್ಲಿನ ವಾಸ್ತವತೆಯನ್ನು ಕಣ್ಣಾರೆ ಕಂಡಿದ್ದೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಥಳೀಯ ಆಡಳಿತ ನಿರ್ಲಕ್ಷ್ಯ ತೋರಿದೆ. ದಮನಿತ ಸಮುದಾಯದ ಪರ ನನ್ನ ಧ್ವನಿ ಇದ್ದೇ ಇರುತ್ತೆ. ಇಲ್ಲಿನ ಜನರ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ’ ಎಂದು ಹೇಳಿದರು.

ದಿಡ್ಡಳ್ಳಿ ಹೋರಾಟಗಾರ್ತಿ ಅನಿತಾ ಮಾತನಾಡಿ, ‘ಶ್ರೀಮಂಗಲ ಗ್ರಾಮದಲ್ಲಿ ನೆಲೆಸಿರುವವರಿಗೆ ಶೀಘ್ರದಲ್ಲೇ ಮೂಲಭೂತ ಸೌಕರ್ಯ ಒದಗಿಸಬೇಕು. ತಪ್ಪಿದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಸರ್ಕಾರ ಮತ್ತು ಸ್ಥಳೀಯ ಆಡಳಿತ ತುರ್ತಾಗಿ ಈ ಬಡಾವಣೆಗೆ ಭೇಟಿ ನೀಡಿ ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಇಲ್ಲಿ ವಾಸವಿರುವವರೆಲ್ಲರೂ ವಸತಿ ವಂಚಿತರೆ. ನಿವೇಶನ ರಹಿತರ ಪಟ್ಟಿಯಲ್ಲಿದ್ದು ಅರ್ಹ ಕುಟುಂಬಗಳೇ ಆಗಿದ್ದು ಇಲ್ಲಿಗೆ ಸ್ಥಳೀಯ ಪಂಚಾಯಿತಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. -ಸೌಕತ್ ಅಲಿ, ಸ್ಥಳೀಯ ನಿವಾಸಿ.

ನಾವು ಇಲ್ಲಿಗೆ ಬಂದು ನೆಲೆಸುವ ಮೊದಲು ಇದು ಕೇಂದ್ರ ತೋಟಗಾರಿಕಾ ಇಲಾಖೆಯ ಸುಪರ್ದಿಯಲ್ಲಿತ್ತು. ಬಳಿಕ ಸ್ಥಳೀಯ ಪಂಚಾಯತಿ ಸರ್ವೇ ಮಾಡಿ ಇದನ್ನು ಸರಕಾರಿ ಪೈಸಾರಿ ಜಾಗ ಎಂದು ಗುರುತಿಸಿ ಇದನ್ನು ವಸತಿ ರಹಿತರಿಗೆ ನೀಡಲು ಮೀಸಲಿರಿಸಿತ್ತು. ಅಲ್ಲಿ ವರೆಗೂ ಇಲ್ಲಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಯಾವಾಗ ಇಲ್ಲಿ ಜನ ಮನೆ ನಿರ್ಮಿಸಿಕೊಳ್ಳಲು ಮುಂದಾದರೂ ಅವಾಗ ಎಲ್ಲವನ್ನು ಕಡಿತಗೊಳಿಸಿದ್ದಾರೆ. ಇದರಿಂದ ನಮಗೆ ಬಾರಿ ತೊಂದರೆಯಾಗುತ್ತಿದೆ . ಸ್ಥಳೀಯ ಶಾಸಕರು ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕಾಗಿದೆ.-ಸುಮಿತ್ರಾ, ಕಾರ್ಮಿಕ ಮಹಿಳೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವುದು ಅಗತ್ಯ: ಎ.ಎಸ್‌. ಪೊನ್ನಣ್ಣ
ಯುವಪೀಳಿಗೆಗೆ ಭತ್ತ ಕೃಷಿ ಅರಿವು ಅಗತ್ಯ: ಮಧುಕುಮಾರ್