ಕನ್ನಡಪ್ರಭ ವಾರ್ತೆ ಹೊಸಪೇಟೆ
ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಗೊಳಿಸಿರುವ ಸರಕಾರ ಕ್ರಮ ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ 1008 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲಾಗಿದೆ. ಸರಕಾರದ ಈ ಆದೇಶ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಮಾರಕವಾಗಲಿದೆ. ಅಂಗನವಾಡಿ ನೌಕರರು ಉದ್ಯೋಗ ವಂಚಿತರಾಗಲಿದ್ದಾಾರೆ. ಅಂಗನವಾಡಿ ಕೇಂದ್ರಗಳು ಮುಚ್ಚುವ ಪರಿಣಾಮ ಬಡ ಮಕ್ಕಳು, ಬಡ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗದಂತಾಗುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಎ.ಕರುಣಾನಿಧಿ, ಆರ್. ಭಾಸ್ಕರ್ ರೆಡ್ಡಿ, ಕೆ. ನಾಗರತ್ನಮ್ಮ, ರೇಣಕಮ್ಮ, ಎಂ.ಗೋಪಾಲ, ಎನ್. ಯಲ್ಲಾಲಿಂಗ, ವೈ. ಉಮಾಮಹೇಶ್ವರ್, ಎಲ್.ಮಂಜುನಾಥ, ಯಲ್ಲಮ್ಮ ಇತರರಿದ್ದರು.
ಸಿಎಂಗೆ ಘೆರಾವ್:ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಿರುವ ಸರಕಾರ ಕ್ರಮ ಖಂಡಿಸಿ, ಕೆಡಿಪಿ ಸಭೆಗಾಗಿ ಜೂ. 21ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೆರಾವ್ ಹಾಕಲಾಗುವುದು ಎಂದು ಸಂಘಟನೆ ಎಚ್ಚರಿಸಿದರು.
ಅಂಗನವಾಡಿಗಳ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿಕನ್ನಡಪ್ರಭ ವಾರ್ತೆ ಸಂಡೂರುಕಲ್ಯಾಣ ಕರ್ನಾಟಕ ಭಾಗದಲ್ಲಿ 1008 ಸರ್ಕಾರಿ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ, ಯುಕೆಜಿ) ಜಾರಿಗೊಳಿಸುತ್ತಿರುವುದನ್ನು ವಿರೋಧಿಸಿ, ಈ ಯೋಜನೆಯನ್ನು ಅಂಗನವಾಡಿಗಳ ಮೂಲಕ ಜಾರಿಗೊಳಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್‌ಟ್ ಪಕ್ಷ (ಮಾರ್ಕ್ಸ್‌ವಾದಿ) ತಾಲೂಕು ಸಮಿತಿ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಸಂಸದ ಈ. ತುಕಾರಾಂ, ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ರವಾನಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಿಪಿಐ(ಎಂ) ತಾಲೂಕು ಸಮಿತಿ ಕಾರ್ಯದರ್ಶಿ ಎ. ಸ್ವಾಮಿ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸಲು ಹೊರಟಿರುವುದು ಮಹಿಳೆಯರ, ದಲಿತರ ಹಾಗೂ ಎಲ್ಲ ಬಡವರ ವಿರೋಧಿ ನೀತಿಯಾಗಿದೆ. ಈಗಿನ ನೀತಿಯಂತೆ ಇನ್ನುಮುಂದೆ 3 ರಿಂದ 6 ವಯಸ್ಸಿನ ಮಕ್ಕಳ ಹಾರೈಕೆ, ಬಾಲ್ಯ ಶಿಕ್ಷಣದ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಶಾಲೆಗಳು ವಹಿಸಿಕೊಳ್ಳಲಿವೆ. ಇದರಿಂದ ಇದು ವರೆಗೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರಗಳಿಗೆ ಕೆಲಸವಿಲ್ಲದಂತಾಗುತ್ತದೆ ಎಂದು ದೂರಿದರು. ಅಂಗನವಾಡಿ ಕೇಂದ್ರಗಳು ಮುಚ್ಚುವುದರಿಂದ ಬಡ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯವರಿಗೆ ದೊರೆಯುತ್ತಿದ್ದ ಪೌಷ್ಟಿಕ ಆಹಾರ ದೊರೆಯದಂತಾಗುತ್ತದೆ. ಮುಂದೆ ಶಿಕ್ಷಣ ಖಾಸಗೀಕರಣವಾದಾಗ, ಪೂರ್ವ ಪ್ರಾಥಮಿಕ ಶಿಕ್ಷಣವೂ ಖಾಸಗೀಕರಣಗೊಳ್ಳಲಿದೆ. ಆದ್ದರಿಂದ ಬಡವರ, ದಲಿತರ ಹಾಗೂ ಮಹಿಳೆಯರ ವಿರೋಧಿಯಾದ ಈ ಯೋಜನೆಯ ಆದೇಶವನ್ನು ಹಿಂಪಡೆದು, ಅಂಗನವಾಡಿಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.ಪಕ್ಷದ ಮುಖಂಡರಾದ ಜೆ.ಎಂ. ಚನ್ನಬಸಯ್ಯ, ಕಲಂದರ್ ಬಾಷ, ಹೆಚ್. ದುರ್ಗಮ್ಮಾ ಕೊಂಡಾಪುರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಿ.ಎಸ್. ಖಾಜಾಬನ್ನಿ, ಕಾರ್ಯದರ್ಶಿ ರೇಖಾ, ಸದಸ್ಯರಾದ ಶಂಕ್ರಮ್ಮ, ಜಯಪ್ರದ, ಚಂದ್ರಮ್ಮ, ನೇತ್ರಮ್ಮ, ಎಚ್. ನಾಗಮ್ಮ, ಗೌರಮ್ಮ, ಮಂಜಮ್ಮ, ಮಂಗಳಗೌರಿ, ರೇಣುಕಾ ಮುಂತಾದವರು ಉಪಸ್ಥಿತರಿದ್ದರು.