ಸರ್ಕಾರಿ ಅಂಗನವಾಡಿಯಲ್ಲೂ ಎಲ್‌ಕೆಜಿ, ಯುಕೆಜಿ ಶುರು!

KannadaprabhaNewsNetwork |  
Published : Oct 04, 2025, 12:00 AM IST
7878 | Kannada Prabha

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೋಷಕರನ್ನು ಸರ್ಕಾರಿ ಅಂಗನವಾಡಿಗಳತ್ತ ಸೆಳೆಯಲು ಸರ್ಕಾರಿ ಅಂಗನವಾಡಿಗಳಲ್ಲೂ ಮಾಂಟೇಸರಿ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಶುರು ಮಾಡುತ್ತಿದೆ.

ಬಸವರಾಜ ಹಿರೇಮಠ

ಧಾರವಾಡ:

ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಗೀಳು ಹೆಚ್ಚಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಲ್ಲಿಯೇ ಕಲಿಯಬೇಕೆಂದು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪೋಷಕರನ್ನು ಸರ್ಕಾರಿ ಅಂಗನವಾಡಿಗಳತ್ತ ಸೆಳೆಯಲು ಸರ್ಕಾರಿ ಅಂಗನವಾಡಿಗಳಲ್ಲೂ ಮಾಂಟೇಸರಿ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಶುರು ಮಾಡುತ್ತಿದೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರವಾಗಿದೆ. ಕರ್ನಾಟಕದಲ್ಲಿ ಅಂಗನವಾಡಿಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಅ. 19ರಂದು ಈ ಯೋಜನೆ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.

10000 ಕೇಂದ್ರಗಳಲ್ಲಿ:ಮೊದಲ ಹಂತದಲ್ಲಿ ರಾಜ್ಯದ ಹತ್ತು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲಾಗುವುದು. ನಂತರ, ಈ ಕಾರ್ಯಕ್ರಮ ಉಳಿದ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದ್ದು, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಮತ್ತು ಬ್ಯಾಗ್‌ ಒದಗಿಸುವ ಯೋಜನೆ ಇದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ತರಗತಿಗಳ ದೈನಂದಿನ ನಿರ್ವಹಣೆ ನೋಡಿಕೊಳ್ಳಲಿದೆ.

ನಾಲ್ಕರಿಂದ ಐದು ವರ್ಷದ ಮಕ್ಕಳು ಎಲ್‌ಕೆಜಿಗೆ, 5ರಿಂದ 6 ವರ್ಷದವರಿಗೆ ಯುಕೆಜಿಗೆ ದಾಖಲಾಗುತ್ತಾರೆ. ಮೂರರಿಂದ ನಾಲ್ಕು ವರ್ಷದ ಮಕ್ಕಳು ಈಗಾಗಲೇ ಇರುವ ಅಂಗನವಾಡಿ ವ್ಯವಸ್ಥೆಯಲ್ಲಿಯೇ ಮುಂದುವರಿಯುತ್ತಾರೆ. ಕರ್ನಾಟಕದಲ್ಲಿ ಪ್ರಸ್ತುತ 69,892 ಅಂಗನವಾಡಿಗಳಿವೆ. ಮೊದಲಿಗೆ, 5,000 ಕೇಂದ್ರಗಳಲ್ಲಿ ಮಾಂಟೆಸರಿ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ, ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಈ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ಹೆಚ್ಚಿಸಲಾಗಿದೆ.ಧಾರವಾಡದಲ್ಲಿ 100:

ಸಚಿವೆ ಹೆಬ್ಬಾಳ್ಕರ್ ತವರು ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ 5,556 ಅಂಗನವಾಡಿಗಳಿದ್ದು, ಅವುಗಳಲ್ಲಿ 750 ಮೊದಲ ಹಂತದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲಿವೆ. ಧಾರವಾಡ ಜಿಲ್ಲೆಯಲ್ಲಿ 1622 ಪೈಕಿ 100 ಅಂಗನವಾಡಿಗಳನ್ನು ಆಯ್ಕೆ ಮಾಡಲಾಗಿದೆ. ಗದಗ, ಹಾವೇರಿ ಮತ್ತು ಉತ್ತರ ಕನ್ನಡವನ್ನು ಸಹ ಆರಂಭಿಕ ಹಂತದಲ್ಲಿ ಸೇರಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಎರಡು ತರಗತಿ ಕೊಠಡಿ ಬೇಕಾಗಿರುವುದರಿಂದ ಮೊದಲ ಹಂತದಲ್ಲಿ ಎರಡು ಅಂಗನವಾಡಿಗಳು ಇರುವ ಸ್ವಂತ ಕಟ್ಟಡ ಇರುವ ಕೇಂದ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಉಳಿದವುಗಳಿಗೆ ಮುಂದಿನ ವರ್ಷ ವಿಸ್ತರಣೆ ಮಾಡಲಾಗುವುದು. ಇನ್ನು, ಹೊಸದಾಗಿ ಶಿಕ್ಷಕರ ನೇಮಕಾತಿ ಇಲ್ಲ. ಬದಲಾಗಿ, ಈಗಾಗಲೇ ಅಂಗನವಾಡಿಗಳಲ್ಲಿ ಕೆಲಸ ಮಾಡುತ್ತಿರುವ 17,000ಕ್ಕೂ ಹೆಚ್ಚು ಪದವೀಧರರಿಗೆ ತರಗತಿ ನಡೆಸಲು ವಿಶೇಷ ತರಬೇತಿ ಈಗಾಗಲೇ ನೀಡಿದೆ. ಹೊಸ ತರಗತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ನೀಡಲಾಗುವುದು, ಪ್ರತಿ ಕೇಂದ್ರಕ್ಕೆ 35 ಮಕ್ಕಳಂತೆ ತರಗತಿ ಬೋಧನೆಯ ಜತೆಗೆ, ಆನ್‌ಲೈನ್ ತರಗತಿ ಪರಿಚಯಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಡಾ. ಎಚ್‌.ಎಚ್‌. ಕುಕನೂರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇರದಂತೆ, ಪೋಷಕರನ್ನು ಆಕರ್ಷಿಸುವ ರೀತಿಯಲ್ಲಿ ಆಧುನಿಕವಾಗಿ, ಮಾಂಟೇಸರಿ ಮಾದರಿಯಲ್ಲಿ ಈ ಅಂಗನವಾಡಿಗಳನ್ನು ಆರಂಭಿಸಲಾಗುತ್ತಿದೆ. ಪದವೀಧರ ಶಿಕ್ಷಕರಿದ್ದು, ಟಿವಿ ಸೌಲಭ್ಯ, ಸ್ಮಾರ್ಟ್‌ ಕ್ಲಾಸ್‌ ನಡೆಯಲಿವೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ಒದಗಿಸಲು ಮತ್ತು ಮಕ್ಕಳು ಸರಾಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಪರಿವರ್ತನೆಗೊಳ್ಳಲು ಈ ಅಂಗನವಾಡಿಗಳು ಸಹಾಯವಾಗಲಿವೆ.

ಎಚ್‌.ಎಚ್. ಕುಕುನೂರ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ