ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘದ ಗೌರವಾಧ್ಯಕ್ಷ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ರೈತರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ನೀಡಿದ ಭರವಸೆಯಂತೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಲೂಟಿ ರಾಜಕಾರಣದಲ್ಲಿ ತೊಡಗಿವೆ ಎಂದು ಕಾರ್ಯಕರ್ತರು ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕಾದರೆ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಚುನಾವಣೆಗಳಲ್ಲಿ ರೈತ ಸಂಘ ಏಕಾಂಗಿಯಾಗಿ ಸ್ಪರ್ಧಿಸುವುದು ಅನಿವಾರ್ಯ ಎಂದು ಕಾರ್ಯಕರ್ತರು ಹಕ್ಕೊತ್ತಾಯ ಮಂಡಿಸಿದರು. ಚುನಾವಣೆಗೆ ಪೂರ್ವಭಾವಿಯಾಗಿ ರೈತ ಸಂಘದ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜನೆ ಮಾಡುವ ಮೂಲಕ ಹೊಸ ಸಮಿತಿ ರಚನೆ ಮಾಡುವುದಕ್ಕೆ ಮುಖಂಡರು ಮತ್ತು ಕಾರ್ಯಕರ್ತರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಜಿ.ಎ.ಶಂಕರ್, ಲಿಂಗಪ್ಪ ಜಿ.ಶೆಟ್ಟಿಹಳ್ಳಿ ರವಿಕುಮಾರ್, ವಿನೋದ್ ಬಾಬು, ವರದರಾಜು, ಗೊಲ್ಲರದೊಡ್ಡಿ ಅಶೋಕ, ಮುಟ್ಟೇನಹಳ್ಳಿ ವೆಂಕಟೇಶ್, ರಘು, ಡಿ.ಕೆ.ಚಂದ್ರು ಮತ್ತಿತರರು ಭಾಗವಹಿಸಿದ್ದರು.ರಸಗೊಬ್ಬರ ಜಪ್ತಿ ಪ್ರಕರಣ ತನಿಖೆ ಪ್ರಗತಿಯಲ್ಲಿ: ಅಶೋಕ್
ಪ್ರಕರಣ ಸಂಬಂಧ ರೈತ ಸಂಘದ ಕಾರ್ಯಕರ್ತರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿ ಅರಿತ ಜಂಟಿ ನಿರ್ದೇಶಕ ಅಶೋಕ್ ಸಹಾಯಕ ಕೃಷಿ ನಿರ್ದೇಶಕಿ ಎಚ್. ಜಿ.ಪ್ರತಿಭಾ ಅವರೊಂದಿಗೆ ಪ್ರವಾಸಿ ಮಂದಿರಕ್ಕೆ ತೆರಳಿ ರೈತ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.
ಜಪ್ತಿ ಮಾಡಲಾದ ರಸಗೊಬ್ಬರಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಅಂತಿಮ ವರದಿ ಬಂದ ನಂತರ ಸೋಮೇಶ್ವರ ಫರ್ಟಿಲೈಸರ್ಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಂಟಿ ನಿರ್ದೇಶಕ ಅಶೋಕ್ ಭರವಸೆ ನೀಡಿದರು.