ಮಾಗಡಿ: ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.
ಜವಾಬ್ದಾರಿಯುತ ಆಡಳಿತ ಇದ್ದರೆ ಅಭಿವೃದ್ಧಿ: ರಾಜ್ಯದಲ್ಲೇ ಮಾದರಿ ಗೋದಾಮಗಳನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಸಕೋಟೆಯಲ್ಲಿ ಉತ್ತಮವಾಗಿ ಟಿಎಪಿಸಿಎಂಎಸ್ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಮೀರಿಸುವ ಕೆಲಸ ನಮ್ಮ ತಾಲೂಕು ಕೂಡ ಮಾಡಬೇಕು. ಇದಕ್ಕೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಎಸ್.ರವಿ ಸಹಕಾರ ಅತಿಮುಖ್ಯ. ನನ್ನ ಸಹೋದರ ಎಚ್.ಎನ್.ಅಶೋಕ್ ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ನಮ್ಮ ವಿರೋಧಿಗಳು ಅವರ ಬಗ್ಗೆ ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ನಾಡು ಸ್ವಚ್ಛವಾಗುವ ನಿಟ್ಟಿನಲ್ಲಿ ವಿರೋಧಿಗಳಿದ್ದಾಗ ಮಾತ್ರ ಮತ್ತಷ್ಟು ಅಭಿವೃದ್ಧಿಗೆ ವೇಗ ಸಿಗಲಿದೆ. ನನ್ನನ್ನು ಕಟ್ಟಿ ಹಾಕುತ್ತೇನೆಂದು 35 ವರ್ಷಗಳಿಂದ ಎಷ್ಟೋ ಜನ ಬಂದು ಹೋಗಿದ್ದಾರೆ ಎಂದು ಮಾಜಿ ಶಾಸಕರ ವಿರುದ್ಧ ಸಚಿವ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಮಾಗಡಿಯಲ್ಲಿ ರಾಜ್ಯದಲ್ಲೇ ಮಾದರಿ ಗೋದಾಮು ನಿರ್ಮಾಣ ಮಾಡಿರುವುದು ಹೆಮ್ಮೆ. ಸಹಕಾರ ಕ್ಷೇತ್ರಕ್ಕೆ ಸಚಿವ ಬಾಲಕೃಷ್ಣ ಹೆಚ್ಚು ಒತ್ತು ಕೊಡುತ್ತಿದ್ದು ಇಡೀ ರಾಜ್ಯದಲ್ಲೇ ಮಾದರಿ ಎಂಬುವಂತೆ ಕನಕಪುರದಲ್ಲಿ ಕ್ಷೀರ ಭವನ ನಿರ್ಮಾಣ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಹೇಳುವಂತೆ ಸಾಕ್ಷಿಗುಡ್ಡೆ ಕೊಟ್ಟಾಗ ಮಾತ್ರ ಕೊಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ. ಮೂರ್ಖರು ಜಾಲತಾಣಗಳಲ್ಲಿ ಖಾಲಿ ಮಾತುಗಳನ್ನು ಆಡಿ ಟೀಕೆ ಮಾಡುತ್ತಾರೆ. ಯೋಗ್ಯತೆ ಇದ್ದರೆ ಈ ರೀತಿ ಅಭಿವೃದ್ಧಿ ಮಾಡಿ ತೋರಿಸಬೇಕು ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಸಂಸ್ಥಾನ ಮಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್, ಗ್ಯಾರಂಟಿ ಅನುಷ್ಠಾನದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಕೆ.ರಾಜು, ತಹಸೀಲ್ದಾರ್ ರಂಜಿತ್, ತಾಪಂ ಜೈಪಾಲ್, ಸಹಕಾರ ಸಂಘದ ಉಪ ನಿಬಂಧಕರಾದ ಅಜಿತ್ ಶಿರಹಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಸೋಮಶೇಖರ್, ಎಂ.ಆರ್.ಮಂಜುನಾಥ್ ಇತರರು ಭಾಗವಹಿಸಿದ್ದರು.
ಮಾಗಡಿಯಲ್ಲಿ ಟಿಎಪಿಸಿಎಂಎಸ್ ಆಯೋಜಿಸಿದ್ದ ವಜ್ರ ಮಹೋತ್ಸವ ಭವನ ಹಾಗೂ ಗೋದಾಮು ಉದ್ಘಾಟನಾ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಸನ್ಮಾನಿಸಿದರು.