ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಸ್ಥಳೀಯರು ಮಾಜಿ ಸಚಿವ ರೇಣುಕಾಚಾರ್ಯ ಅವರಲ್ಲಿ ಮನವಿ ಮಾಡಿದರು.ಗುರುವಾರ ಪಟ್ಟಣಕ್ಕೆ ಭೇಟಿ ನೀಡಿದ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದ ಹಿಂದೂ ಕಾರ್ಯಕರ್ತರು, ಮದ್ದೂರಿನಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ವಿವರಿಸಿದರು. ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಬಗ್ಗೆ ದಾಖಲೆಗಳನ್ನೆಲ್ಲಾ ನೀಡಿ ಅದನ್ನು ತೆರವಿಗೊಳಿಸಿಕೊಡಬೇಕೆಂದು ಕೋರಿದಾಗ, ಸ್ಥಳೀಯರಿಂದ ಮನವಿ ಸ್ವೀಕರಿಸಿದ ರೇಣುಕಾಚಾರ್ಯ, ಈ ವಿಷಯವಾಗಿ ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರದಲ್ಲಿದೆ. ಗಣೇಶ ಮೆರವಣಿಗೆ ಮೇಲೆ ಕಸೆಯುವವರು ಶಾಂತಿ ದೂತರಾ. ಪಾಕಿಸ್ತಾನಕ್ಕೆ ಹೋಗಿ ಭಾರತದ ಪರ ಘೋಷಣೆ ಕೂಗಿದರೆ ಅವರು
ಸುಮ್ಮನಿರುವರೇ. ಇಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿಲ್ಲ. ರಾಹುಲ್, ಸೋನಿಯಾ ಅಣತಿಯಂತೆ ಸರ್ಕಾರ ನಡೆಯುತ್ತಿದೆ. ಇವರು ಆಪರೇಷನ್ ಸಿಂದೂರ ಬಗ್ಗೆ ಟೀಕೆ ಮಾಡುತ್ತಾರೆ. ಪಾಕಿಸ್ತಾನದ ಮಾಧ್ಯಮದಲ್ಲಿ ಸಿದ್ದರಾಮಯ್ಯ ವಿಚಾರ ಪ್ರಸಾರವಾಯಿತು. ಕಾಂಗ್ರೆಸ್‌ಗೂ ಪಾಕಿಸ್ತಾನಕ್ಕೂ ನಂಟಿರುವುದರಿಂದಲೇ ಮುಸ್ಲಿಮರನ್ನು ಕಂಡರೆ ಕಾಂಗ್ರೆಸ್‌ನವರಿಗೆ ವ್ಯಾಮೋಹ ಜಾಸ್ತಿ ಎಂದು ಲೇವಡಿ ಮಾಡಿದರು.
ಭಾರತ್ ಮಾತೆಗೆ ಜೈ ಎಂದವರ ವಿರುದ್ಧ ಎಫ್ ಐಆರ್ ಮಾಡುವರು. ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಇವರು ಬ್ರದರ್ ಎನ್ನುತ್ತಾರೆ. ಇವರೆಲ್ಲಾ ಶಾಂತಿ ದೂತರು. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ತಾವು ಹುಟ್ಟಿದ ಧರ್ಮಕ್ಕೆ ಅಪಮಾನ ಮಾಡ್ತಿದ್ದಾರೆ ಎಂದು ಟೀಕಿಸಿದರು.ಭದ್ರಾವತಿ ಶಾಸಕ ಸಂಗಮೇಶ್ವರ್ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದಾರೆ. ನಿಮ್ಮ ಜೊತೆ ನಿಮ್ಮ ಬೀಗರನ್ನೂ ಕರೆದುಕೊಂಡು ಹೋಗಿ ಮತಾಂತರ ಮಾಡಿಕೊಳ್ಳಿ ಎಂದು ಕುಟುಕಿದ ರೇಣುಕಾಚಾರ್ಯ, ಗಣೇಶನ ಮೆರವಣಿಗೆ ಮೇಲೆ ಕಲ್ಲೆಸೆಯುವ ಅಯೋಗ್ಯರನ್ನು ಹೆಡೆಮುರಿ ಕಟ್ಟಬೇಕು. ಕಂಡಲ್ಲಿ ಗುಂಡಿಟ್ಟು ಹೊಡೆಯಬೇಕು. ಇಂತಹ ದಾಳಿಗಳ ಮುಂದವರೆದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.