ನಾಗಮಂಗಲದಲ್ಲಿ ಲೋಕ ಅದಾಲತ್‌: 174 ಪ್ರಕರಣಗಳು ಇತ್ಯರ್ಥ

KannadaprabhaNewsNetwork |  
Published : Jul 13, 2025, 01:19 AM IST
12ಕೆಎಂಎನ್ ಡಿ34 | Kannada Prabha

ಸಾರಾಂಶ

ನಾಗಮಂಗಲ ಪಟ್ಟಣದ ನಾಲ್ಕು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ 2.13 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಿಚಾರವುಳ್ಳ ವಿವಾದಗಳು ಸೇರಿ ಒಟ್ಟು 174 ಪ್ರಕರಣಗಳು ಇತ್ಯರ್ಥಗೊಂಡವು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ನಾಲ್ಕು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ 2.13 ಕೋಟಿಗೂ ಹೆಚ್ಚು ಮೌಲ್ಯದ ವಸ್ತು ವಿಚಾರವುಳ್ಳ ವಿವಾದಗಳು ಸೇರಿ ಒಟ್ಟು 174 ಪ್ರಕರಣಗಳು ಇತ್ಯರ್ಥಗೊಂಡವು.

ನಾಲ್ಕು ವಿಭಾಗಗಳ ನ್ಯಾಯಾಲಯಗಳಲ್ಲಿ ಚೆಕ್‌ ಬೌನ್ಸ್, ನಿರ್ಬಂಧಕಾಜ್ಞೆ, ಮೋಟಾರು ವಾಹನ ಕಾಯ್ದೆ, ಸಿವಿಲ್, ಕ್ರಿಮಿನಲ್ ಒಳಗೊಂಡಂತೆ 2025ರ ಜು.1ಕ್ಕೆ ಒಟ್ಟು 8394 ಪ್ರಕರಣಗಳು ಬಾಕಿ ಇದ್ದವು. ಇವುಗಳ ಪೈಕಿ ಶನಿವಾರ ನಡೆದ ಲೋಕ್‌ ಅದಾಲತ್‌ನಲ್ಲಿ 780 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಎರಡೂ ಕಡೆಯ ಕಕ್ಷಿದಾರರು ಮತ್ತು ವಕೀಲರ ಸಮಕ್ಷಮದಲ್ಲಿ 174 ಪ್ರಕರಣಗಳು ಇತ್ಯರ್ಥಗೊಂಡವು. ಇವುಗಳಲ್ಲಿ ಒಟ್ಟು 2,13,82,363ರು. ಮೌಲ್ಯದ ವಸ್ತು ವಿಚಾರವುಳ್ಳ ವಿವಾದಗಳೂ ಸಹ ರಾಜೀಸಂಧಾನದ ಮೂಲಕ ಬಗೆಹರಿದವು.

ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಫೆಲಿಕ್ಸ್ ಅಲ್ಫೋನ್ಸ್ ಅಂಥೋನಿ ಮಾತನಾಡಿ, ಕಾನೂನಿನ ಅರಿವಿನ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಕ್ಷುಲ್ಲಕ ಕಾರಣವನ್ನೇ ನೆಪ ಮಾಡಿಕೊಂಡು ನ್ಯಾಯಾಲಯದ ಮೊರೆಹೋಗುತ್ತಾರೆ. ಇದರಿಂದ ದ್ವೇಷ, ವೈಷಮ್ಯದ ಜೊತೆಗೆ ಹಣ ಹಾಗೂ ಸಮಯ ವ್ಯರ್ಥವಾಗುವುದೇ ಹೊರತು ಯಾವುದೇ ಸಾಧನೆ ಮಾಡಿದಂತಾಗುವುದಿಲ್ಲ. ಹಳ್ಳಿಗಳಲ್ಲಿ ಸಣ್ಣ ಪುಟ್ಟ ಘಟನೆಗಳು ಸಂಭವಿಸಿದಾಗ ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜೀಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದ ಪಕ್ಷದಲ್ಲಿ ಮಾತ್ರ ಕಾನೂನಿನ ಸಹಾಯ ಪಡೆದು ತಮ್ಮ ಸಮಸ್ಯೆಗೆ ಸೂಕ್ತ ನ್ಯಾಯ ಪಡೆದುಕೊಳ್ಳಬೇಕು ಎಂದರು.

ನ್ಯಾಯಾಲಯದಲ್ಲಿ ನಡೆಯುವ ಲೋಕ ಅದಾಲತ್‌ನಲ್ಲಿ ಒಬ್ಬರಿಗೆ ಸೋಲು ಮತ್ತೊಬ್ಬರಿಗೆ ಗೆಲುವು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಎರಡೂ ಕಡೆಯ ಕಕ್ಷಿದಾರರಿಗೂ ಸಮಾನ ನ್ಯಾಯ ದೊರೆಯುತ್ತದೆ. ಸರ್ವೋಚ್ಛ ನ್ಯಾಯಾಲಯದ ಈ ಮಹಾತ್ವಾಕಾಂಕ್ಷೆ ಕಾರ್ಯಕ್ರಮದಿಂದ ಅನೇಕ ಜನರಿಗೆ ಅನುಕೂಲವಾಗಲಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಫೆಲಿಕ್ಸ್ ಅಲ್ಫೋನ್ಸ್ ಅಂಥೋನಿ, ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಎಚ್.ಎಸ್. ಶಿವರಾಜು ಮತ್ತು ಅಪರ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ ಅವರು ನಾಲ್ಕು ವಿಭಾಗಗಳ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ರಾಜೀ ಸಂಧಾನ ನಡೆಸಿ ಹಲವು ದಿನಗಳಿಂದ ಬಾಕಿ ಉಳಿದಿದ್ದ 174 ಪ್ರಕರಣಗಳಿಗೆ ಮುಕ್ತಿ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕರಾದ ಟಿ.ಆರ್.ಶ್ರೀದೇವಿ, ಅರುಣಾಬಾಯಿ, ವಕೀಲರ ಸಂಘದ ಅಧ್ಯಕ್ಷ ಮಹದೇವ, ಆರೋಗ್ಯ ನಿರೀಕ್ಷಕ ವೆಂಕಟೇಶ್, ವಕೀಲರಾದ ರಿಹಾನಾಭಾನು, ಎಂ.ತಹಸೀನ್, ಟಿ.ಎನ್.ಚಂದ್ರಶೇಖರ್, ಎಂ.ಪಿ. ಪ್ರಭುಸ್ವಾಮಿ, ಎಂ.ಎಸ್.ರವಿಕುಮಾರ್, ಗೋಪಾಲಮೂರ್ತಿ, ಎನ್.ವಿ.ಮೋಹನ್‌ರಾಜ್, ಡಿ.ಬಿ.ರಾಜಯ್ಯ ಸೇರಿದಂತೆ ಅಭಿಯೋಜನಾ ಇಲಾಖೆ, ಬ್ಯಾಂಕ್ ಮತ್ತು ವಿಮಾ ಕಂಪನಿಗಳ ಅಧಿಕಾರಿಗಳು ಮತ್ತು ನಾಲ್ಕೂ ನ್ಯಾಯಾಲಯಗಳ ವಕೀಲರು, ಕಕ್ಷಿದಾರರು ಇದ್ದರು.

PREV

Recommended Stories

ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ
ಜಿಬಿಎ, 5 ಪಾಲಿಕೆಗೆ ಅಧಿಕಾರಿಗಳ ಹುದ್ದೆ ಮರು ವಿನ್ಯಾಸ