ಬ್ಯಾಡಗಿ: ತಾಲೂಕು ಕಾನೂನು ಸೇವೆಗಳ ಸಮಿತಿ ನೇತೃತ್ವದಲ್ಲಿ ಡಿ. 13ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಲ್ಲಿ ₹ 4.37 ಕೋಟಿಗೂ ಅಧಿಕ ಮೊತ್ತದ ಒಟ್ಟು 4679 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಯುವ ದಂಪತಿಗಳಿಬ್ಬರನ್ನು ಒಂದುಗೂಡಿಸಿದ್ದು ಪ್ರಸಕ್ತ ಲೋಕ ಅದಾಲತ್ ವಿಶೇಷವೆನಿಸಿತು.ಈ ಕುರಿತು ಪ್ರಕಟಣೆ ನೀಡಿರುವ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ವರಿ ಪುರಾಣಿಕ ಸಿವಿಲ್ & ಕ್ರಿಮಿನಲ್ ಎರಡೂ ವಿಭಾಗ ಸೇರಿದಂತೆ ಬಾಕಿಯಿದ್ದ ಬ್ಯಾಂಕ್ ವಸೂಲಾತಿ ಪ್ರಕರಣ, ಚೆಕ್‌ಬೌನ್ಸ್, ವಾಹನ ಅಪಘಾತ, ಸಿವಿಲ್ ವ್ಯಾಜ್ಯಗಳು, ಅಮಲ್ದಾರಿ, ಜೀವನಾಂಶ, ಕೌಟುಂಬಿಕ ಕಲಹ, ಗೃಹ ಕೃತ್ಯ, ದೌರ್ಜನ್ಯ, ಲಘು ಅಪರಾಧ, ವ್ಯಾಜ್ಯ ಪೂರ್ವಸಾಲ ವಸೂಲಾತಿ, ಪ್ರಕರಣ ಸೇರಿದಂತೆ ರಾಜೀ ಸಂಧಾನದ ಒಟ್ಟು 4.37.33.598 ರು. ಮೊತ್ತದ ಪ್ರಕರಣ ಇತ್ಯರ್ಥಗೊಳಿಸಲಾಯಿತು.4679 ಪ್ರಕರಣ ಇತ್ಯರ್ಥ: ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ 171 ಬಾಕಿ ಪ್ರಕರಣ ಹಾಗೂ 2186 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 2357, ಕಿರಿಯ ದಿವಾಣಿ ನ್ಯಾಯಾಲಯದಲ್ಲಿನ 266 ಬಾಕಿ ಪ್ರಕರಣ ಹಾಗೂ 2227 ವ್ಯಾಜ್ಯ ಪೂರ್ವ ಸೇರಿದಂತೆ ಒಟ್ಟು 2493 ಪ್ರಕರಣಗಳು ಇತ್ಯರ್ಥಗೊಂಡವು.ಒಂದಾದ ದಂಪತಿಗಳು:ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದ ಈರಮ್ಮ (ನಮ್ರತಾ) ಹಾಗೂ ಶರಣಪ್ಪ ಮುರುಗೆಪ್ಪ ರಾಯಣ್ಣನವರ ದಂಪತಿಗಳು ನ್ಯಾಯಾಧೀಶರ ಸಲಹೆ ಮೇರೆಗೆ ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದು ಪ್ರಸಕ್ತ ಪ್ರಸಕ್ತ ಲೋಕ ಅದಾಲತ್ ವಿಶೇಷವೆನಿಸಿತು.