ಲೋಕಸಭೆ ಸ್ಪರ್ಧೆಯ ಬಗ್ಗೆ ಚರ್ಚಿಸಿಲ್ಲ: ಡಾ.ಪ್ರಭಾ

KannadaprabhaNewsNetwork |  
Published : Jan 18, 2024, 02:02 AM IST
17ಕೆಡಿವಿಜಿ9, 10-ದಾವಣಗೆರೆ ವರದಿಗಾರರ ಕೂಟದ ಬಳಿ ಎಸ್ಸೆಸ್ ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇನ್ನೊಂದು ತಿಂಗಳಲ್ಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ತಿಂಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಸಾಧ್ಯತೆ । ಶಾಮನೂರು, ಖರ್ಗೆ, ಡಿಕೆಶಿ ತೀರ್ಮಾನವೇ ಅಂತಿಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಆಗಬಹುದಾದರೂ, ತಮ್ಮ ಸ್ಪರ್ಧೆಯ ಬಗ್ಗೆ ಮನೆಯಲ್ಲಿ ಇನ್ನೂ ಚರ್ಚೆಯೇ ಆಗಿಲ್ಲ ಎಸ್ಸೆಸ್ ಕೇರ್ ಟ್ರಸ್ಟ್ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ನಗರದ ಕೆಬಿ ಬಡಾವಣೆಯಲ್ಲಿ ವರದಿಗಾರರ ಕೂಟದ ಬಳಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಸಮಾಲೋಚನೆ ಶಿಬಿರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಸಿನಿಂದ ತಾವು ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದರು.

ಇನ್ನೊಂದು ತಿಂಗಳಲ್ಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆಯಾಗುವ ಸಾಧ್ಯತೆ ಇದೆ. ಕಳೆದ 3-4 ತಿಂಗಳಿನಿಂದಲೂ ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆಂಬ ಮಾತು ಕೇಳಿ ಬರುತ್ತಿದೆ. ಪಕ್ಷದ ಮುಖಂಡರು, ಕಾರ್ಯಕರ್ತರ ಅಪೇಕ್ಷೆಯೂ ಇದೇ ಆಗಿದೆ. ಹಾಗೆಂದ ಮಾತ್ರಕ್ಕೆ ನಾನೇ ತೀರ್ಮಾನಿಸಲು ಆಗುವುದಿಲ್ಲ ಎಂದು ಅವರು ತಿಳಿಸಿದರು.

ನಾನಂತೂ ಟಿಕೆಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 5 ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ. ಒಂದು ನನಗೆ ಬಿ ಫಾರಂ ಕೊಟ್ಟಾಗ ನೋಡೋಣ. ಎಸ್.ಎಸ್‌.ಮಲ್ಲಿ ಕಾರ್ಜುನ ಸಚಿವರಿದ್ದಾರೆ. ಬಾಪೂಜಿ ಆಸ್ಪತ್ರೆ, ಎಸ್ಸೆಸ್ ಹೈಟೆಕ್ ಆಸ್ಪತ್ರೆ ಸೇರಿದಂತೆ ಬೇರೆ ಬೇರೆ ಸಭೆಗಳಿರುತ್ತವೆ. ಕಾರ್ಯಕ್ರಮಗಳಿರುತ್ತವೆ. ಮದುವೆ, ಶುಭ ಸಮಾರಂಭಗಳಿರುತ್ತವೆ. ಅಲ್ಲೆಲ್ಲಾ ಹೋದಾಗ ಬಹುತೇಕರು ಲೋಕಸಭೆಗೆ ಸ್ಪರ್ಧಿಸುವಂತೆ ಆಸೆ ವ್ಯಕ್ತಪಡಿಸುತ್ತಾರೆ. ಮುಖಂಡರು, ಕಾರ್ಯಕರ್ತರು ಆಸೆ ವ್ಯಕ್ತ ಪಡಿಸುವುದು ತಪ್ಪಲ್ಲ. ಸಮಯ ಬಂದಾಗ ನೋಡೋಣ. ಈಗ ಯಾಕೆ ಚರ್ಚೆ? ಆ ಸಮಯ ಬಂದಾಗ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ದಾವಣಗೆರೆ ಕಾಂಗ್ರೆಸ್ ಸಂಯೋಜಕರಾದ ಎಸ್.ಎಸ್‌.ಮಲ್ಲಿಕಾರ್ಜುನ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು.

ಚುನಾವಣೆ ಅಜೆಂಡಾ ಇಟ್ಟುಕೊಂಡೇನೂ ನಾವು ಕೆಲಸ ಮಾಡುತ್ತಿಲ್ಲ. ಮನೆ ಮನೆಗೆ ಆರೋಗ್ಯ ಸೇವೆ ಕಲ್ಪಿಸಬೇಕೆಂಬ ಕಲ್ಪನೆಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತಿದ್ದೇವೆ. ಚುನಾ ವಣೆ ಗಮನದಲ್ಲಿಟ್ಟುಕೊಂಡು, ನಾವು ಶಿಬಿರ ಆಯೋಜಿಸುತ್ತಿಲ್ಲ. 2019ರಿಂದಲೂ ಆರೋಗ್ಯ ಶಿಬಿರಗಳನ್ನು ನಗರ, ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ಆರೋಗ್ಯ ಶಿಬಿರಕ್ಕೆ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಜನರ ಆರೋಗ್ಯದ ಬಗ್ಗೆ ಅರಿವು, ಜನರ ಆರೋಗ್ಯ ಕಾಪಾಡುವ ಬದ್ಧತೆಯಿಂದ ಶಿಬಿರ ನಡೆಸುತ್ತಿದ್ದೇವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಉತ್ತರ ಬ್ಲಾಕ್ ಅಧ್ಯಕ್ಷ ಕೆ.ಜಿ.ಶಿವಕುಮಾರ, ಯುವ ಮುಖಂಡರಾದ ರಾಘವೇಂದ್ರ ಗೌಡ, ಡೋಲಿ ಚಂದ್ರು, ದತ್ತಾತ್ರೇಯ, ಈರಣ್ಣ, ಹೊಟೆಲ್ ಹನುಮಂತ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು. ಕಿರಿಯರು, ಹಿರಿಯರು, ವಿಕಲಚೇತನರು ಸೇರಿದಂತೆ ನೂರಾರು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದೇ ವೇಳೆ ಎಸ್ಸೆಸ್ ಕೇರ್ ಟ್ರಸ್ಟ್‌ನಿಂದ ಉಚಿತವಾಗಿ ಉಚಿತ ಔಷಧಿ, ಮಾತ್ರೆ ವಿತರಿಸಲಾಯಿತು.

ನಾವು ರಾಮಭಕ್ತರು, ನಮಗೂ ಶ್ರದ್ಧೆ ಇದೆ

ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆಯಾಗುತ್ತಿದೆ. ಶ್ರೀರಾಮಚಂದ್ರನಿಗೆ ಎಲ್ಲರೂ ಭಕ್ತರು. ನಾವೂ ಸಹ ರಾಮನ ಭಕ್ತರು. ಶ್ರೀರಾಮನು ಯಾವುದೋ ಒಂದು ಪಕ್ಷಕ್ಕೆ ಸೀಮಿತರಲ್ಲ. ನಮಗೂ ಶ್ರದ್ಧೆ, ಭಕ್ತಿ ಇದೆ. ನಾವೂ ಸಹ ಪೂಜೆ ಮಾಡುತ್ತೇವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ