ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಶ್ವವಿಖ್ಯಾತ ಹಂಪಿ ಜಾತ್ರೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿಯಿಂದ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮಗಳು ವಿಭಿನ್ನವಾಗಿ ನಡೆದು ಗಮನ ಸೆಳೆದವು.ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಅವರ ಮಾರ್ಗದರ್ಶನದಲ್ಲಿ ವಿಶ್ವ ಪ್ರಸಿದ್ಧ ಪಾರಂಪರಿಕ ತಾಣದಲ್ಲಿ ನಡೆದ ಈ ವಿಶೇಷ ಸ್ವೀಪ್ ಚಟುವಟಿಕೆಗಳಿಂದ ಮತದಾನ ಜಾಗೃತಿಯ ಸಂದೇಶವನ್ನು ಸಾವಿರಾರು ಜನರಿಗೆ ಏಕಕಾಲಕ್ಕೆ ತಲುಪಿಸಲಾಯಿತು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ವಿಜಯನಗರ ಮತ್ತು ತಾಲೂಕು ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ, ಹೊಸಪೇಟೆ ತಾಲೂಕಿನ ಹಂಪಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಹಂಪಿ ವಿರೂಪಾಕ್ಷ ದೇವಸ್ಥಾನ ಮುಂಭಾಗದಲ್ಲಿ ಮತದಾರರ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಪಂಚಾಯತ್‌ನ ಸಿಇಒ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.ಗ್ರಾಮೀಣ ಭಾಗದ ವಿವಿಧ ಸಂಘದ ಪದಾಧಿಕಾರಿಗಳು ತೇರು ಬೀದಿಯಲ್ಲಿ ಮತದಾನ ಜಾಗೃತಿ ಮೂಡಿಸುವ ವಿವಿಧ ಫ್ಲೆಕ್ಸ್ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ತೇರು ಬೀದಿಯಲ್ಲಿ ಸುಮಾರು 200 ಮೀಟರ್ ಉದ್ದಕ್ಕೂ ರಂಗೋಲಿಗಳನ್ನು ಬಿಡಿಸಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಸಂಜಿವೀನಿ-ಸ್ವ ಸಹಾಯ ಸಂಘದ ಸದಸ್ಯರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕೋಲಾಟ ಹಾಗೂ ವಿವಿಧ ಜಾನಪದ ಡೊಳ್ಳು ಕುಣಿತದೊಂದಿಗೆ ಜನಪದ ಕಲಾವಿದರ ಮೂಲಕ ಜನಪದ ಕಲಾ ನೃತ್ಯಗಳ ಮೂಲಕ ಜಾಥಾ ನಡೆಯಿತು. ಹೊಸಪೇಟೆ ತಾಲೂಕಿನ ಸ್ವಚ್ಛ ವಾಹಿನಿ ಮೂಲಕ ಸಹ ಜಾಥಾ ನಡೆಯಿತು. ಸಿಇಒ ಅವರು ಜಾತ್ರೆಯಲ್ಲಿದ್ದ ಅಂಗಡಿಗಳಿಗೆ ತೆರಳಿ ಮತದಾನದ ಕುರಿತು ಜಾಗೃತಿ ಮೂಡಿಸಿದರು. ಮತದಾನದ ಕುರಿತು ಘೋಷಣೆಗಳನ್ನು ಹಾಕಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಅನೇಕ ಜಾಗೃತಿ ಘೋಷ ವಾಕ್ಯಗಳನ್ನು ಒಳಗೊಂಡ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಿಡಿದು ಜಾತ್ರೆಯ ಬೀದಿಗಳಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳಿಗೆ ತೆರಳಿ ರಾಜ್ಯದ, ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ನೈತಿಕ ಮತದಾನ ಹಾಗೂ ಕಡ್ಡಾಯ ಮತದಾನ ಕುರಿತು ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.ಈ ವೇಳೆ ಸಿಇಒ ಸದಾಶಿವ ಪ್ರಭು ಬಿ. ಮಾತನಾಡಿ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಪ್ರಯುಕ್ತ ವಿಜಯನಗರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ಪ್ರಯುಕ್ತ ಗ್ರಾಪಂ ಮಟ್ಟದಲ್ಲಿ ಸಂಜೀವಿನಿ, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಂದ, ನರೇಗಾ ಕೂಲಿ ಕಾರ್ಮಿಕರಿಂದ, ಗ್ರಾಮಸ್ಥರಿಂದ, ಗ್ರಾಮೀಣ ಮಟ್ಟದ ಎಲ್ಲಾ ಇಲಾಖೆಗಳಿಂದ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ವೇಳೆ ಜಿಲ್ಲಾ ಚುನಾವಣಾ ರಾಯಭಾರಿ ಕಾರಮಂಚಪ್ಪ, ಜಿಪಂ ಯೋಜನಾ ನಿರ್ದೇಶಕ ಅಶೋಕ್ ಜಿ.ತೋಟದ್, ಸಹಾಯಕ ಯೋಜನಾ ಅಧಿಕಾರಿ ಲಕ್ಷ್ಮೀಕಾಂತ್, ಯೋಜನಾ ಅಂದಾಜು ಮೌಲ್ಯಮಾಪನ ಅಧಿಕಾರಿ ಪತ್ರಿಬಸಪ್ಪ, ಹೊಸಪೇಟೆ ತಾಪಂ ಇಒ ಹರೀಶ್ ಆರ್., ಸಹಾಯಕ ನಿರ್ದೇಶಕ ಉಮೇಶ್, ಪಿಡಿಓ ಗಂಗಾಧರ್, ಎನ್‌ಆರ್‌ಎಲ್‌ಎಮ್‌ನ ಪ್ರಸನ್ನಕುಮಾರ್, ಜಿಲ್ಲಾ ಐಇಸಿ ಫಾಜೀಲ್ ಅಹ್ಮದ್, ತಾಲೂಕು ಐಇಸಿ ನಾಗರಾಜ್, ಟಿಪಿಎಂ ಕೊಟ್ರೇಶ್ ಹಾಗೂ ವಿವಿಧ ವಿಭಾಗದ ಸಿಬ್ಬಂದಿ ಹಾಗೂ ಜಿಲ್ಲಾ ಹಾಗು ತಾಲೂಕು ಪಂಚಾಯತ್, ಗ್ರಾಪಂ ಸಿಬ್ಬಂದಿ ಇದ್ದರು.