ಕನ್ನಡಪ್ರಭ ವಾರ್ತೆ ಹಿರಿಯೂರು
ಲೋಕಸಭೆ ಚುನಾವಣೆಗೆ ದೇಶದ ಭದ್ರತೆ ಮತ್ತು ಸಮಗ್ರತೆಯೇ ಮುಖ್ಯ ವಿಷಯವಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಘುಚಂದನ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ದೇಶಕ್ಕಾಗಿ ಮೋದಿ, ಜಿಲ್ಲೆಗಾಗಿ ರಘುಚಂದನ್ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕರ್ತರ, ಮುಖಂಡರ ಭೇಟಿ ಆರಂಭಿಸಿರುವ ಅವರು, ದಕ್ಷಿಣ ಕಾಶಿ ತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಭರ್ಜರಿ ಪ್ರಚಾರ ಮಾಡುವ ಮೂಲಕ ರಾಜ್ಯದ ಮತದಾರರಿಗೆ ಒಮ್ಮೆ ಮರುಳು ಮಾಡಲಾಗಿದ್ದು, ಲೋಕಸಭೆ ಚುನಾವಣೆಗೆ ದೇಶದ ಭದ್ರತೆ, ಸಮಗ್ರತೆಯೇ ಮುಖ್ಯ ವಿಷಯವಾಗಿದೆ. ಗ್ಯಾರಂಟಿ ಯೋಜನೆಯನ್ನು ಸ್ಕ್ರ್ಯಾಚ್ ಕಾರ್ಡ್ ತರಹ ಉಜ್ಜಿ ಬಿಸಾಡಲಾಗಿದೆ.
ಗ್ಯಾರಂಟಿ ಯೋಜನೆಯಲ್ಲಿ ಮುಳುಗಿರುವ ಸರ್ಕಾರ ರಾಜ್ಯದ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಿಸಿದೆ. ಕುಣಿಯಲು ಬಾರದವರಿಗೆ ನೆಲಡೊಂಕು ಎಂಬಂತೆ ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೆರಳು ತೋರಿಸುತ್ತಿದ್ದಾರೆ. ಮೋದಿಯವರ ಹತ್ತು ವರ್ಷದ ಆಡಳಿತದ ಅವಧಿಯಲ್ಲಿ ಭಾರತ ವಿಶ್ವಗುರುವಾಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮೋದಿಯವರ ಜನಪ್ರಿಯತೆ ಅರಗಿಸಿಕೊಳ್ಳಲಾಗದ ಕಾಂಗ್ರೆಸ್ಸಿಗರು ಸುಳ್ಳು ಆರೋಪದಲ್ಲಿ ತೊಡಗಿದ್ದಾರೆ.
ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ನಾನೂ ಕೂಡ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂಬುದು ದೇಶದ ಬಹುಜನರ ಆಕಾಂಕ್ಷೆಯಾಗಿದೆ.
ಇದೀಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿರುವ ಕಾರಣ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ. ಚಿತ್ರದುರ್ಗ ಕ್ಷೇತ್ರದ ವ್ಯಾಪ್ತಿಯ ಹಿರಿಯೂರು, ಪಾವಗಡ, ಚಳ್ಳಕೆರೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ವೇಳೆ ಮುಖಂಡರಾದ ಆರ್.ಚಂದ್ರಣ್ಣ, ಹರ್ತಿಕೋಟೆ ಹನುಮಂತಪ್ಪ, ಮುತ್ತುರಾಜ್, ಬಿದರಕೆರೆ ಸೋಮಣ್ಣ,ಆರ್. ರಂಗಸ್ವಾಮಿ, ತಿಮ್ಮರಾಜ್, ವೆಂಕಟೇಶ್ ಮುಂತಾದವರಿದ್ದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜೊತೆಯಾಗಿ ಲೋಕಸಭಾ ಚುನಾವಣೆ ಎದುರಿಸಲಿರುವುದರಿಂದ ಜಿಲ್ಲೆಯಲ್ಲಿ ಈ ಬಾರಿ ಗೆಲುವು ಖಚಿತ. ನಮ್ಮ ಉದ್ದೇಶ ಕಾಂಗ್ರೆಸ್ ಸೋಲಿಸುವುದೇ ಆಗಿರುವುದು. ನಾವೆಲ್ಲಾ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ.
ರಘುಚಂದನ್ ಸ್ನೇಹಿತರ ಮಗ ಆಗಿರುವುದರಿಂದ ಟಿಕೆಟ್ ತಂದಲ್ಲಿ ಅವರ ಗೆಲುವಿಗೆ ಶ್ರಮಿಸಲಾಗುವುದು. ನಮ್ಮ ಪಕ್ಷ ಜಿಲ್ಲೆಯಲ್ಲಿ ಸಾಕಷ್ಟು ಬಲಿಷ್ಠವಾಗಿದ್ದು, ಇದೀಗ ಬಿಜೆಪಿ ಜೊತೆ ಸೇರಿರುವುದು ಯಾರೇ ಅಭ್ಯರ್ಥಿಯಾದರು ಗೆಲ್ಲುವ ನಂಬಿಕೆಯಿದೆ. ಡಿ. ಯಶೋಧರ್. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರು. ಚಿತ್ರದುರ್ಗ