ಅರಕಲಗೂಡಲ್ಲೂ ಶಾಂತಿಯಿಂದ ನಡೆದ ಮತದಾನ

KannadaprabhaNewsNetwork |  
Published : Apr 27, 2024, 01:16 AM IST
26ಎಚ್ಎಸ್ಎನ್7 : ಮತಗಟ್ಟೆಯೊಂದರಲ್ಲಿ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಶುಕ್ರವಾರ ಪ್ರಥಮ ಹಂತದ ಲೋಕಸಭಾ ಚುನಾವಣೆ ನಡೆದಿದ್ದು, ಅರಕಲಗೂಡು ತಾಲೂಕಲ್ಲೂ ಶಾಂತಿಯುತ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ನಡೆಯಿತು. ತಾಲೂಕಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಸಂಜೆ 6ರ ವರೆಗೆ ನಡೆದ ವೋಟಿಂಗ್‌ । ಸರತಿ ಸಾಲಲ್ಲಿ ನಿಂತು ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ರಾಜ್ಯದಲ್ಲಿ ಶುಕ್ರವಾರ ಪ್ರಥಮ ಹಂತದ ಲೋಕಸಭಾ ಚುನಾವಣೆ ನಡೆದಿದ್ದು, ತಾಲೂಕಲ್ಲೂ ಶಾಂತಿಯುತ ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ನಡೆಯಿತು. ತಾಲೂಕಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಬೇಸಿಗೆ ಬಿಸಿಲಿನ ಅಬ್ಬರದ ಹಿನ್ನೆಲೆಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಉದ್ದದ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು, ಬೆಳಿಗ್ಗೆ ಎಂಟು ಗಂಟೆಯಿಂದಲೇ ಬಿಸಿಲು ಜನರನ್ನು ಕಂಗೆಡಿಸಿದೆ. ಹೀಗಾಗಿ ಬೆಳಿಗ್ಗೆಯೇ ತಮ್ಮ ಹಕ್ಕು ಚಲಾಯಿಸಲು ಮತದಾರರು ಮತಗಟ್ಟೆಗಳಿಗೆ ಅತ್ಯಂತ ಉತ್ಸಾಹದಿಂದಲೇ ಆಗಮಿಸಿ ಹಕ್ಕು ಚಲಾವಣೆ ಮಾಡಿ ಸಂಭ್ರಮಿಸಿದರು.

ಯುವ ಮತದಾರರು, ಹಿರಿಯ ನಾಗರಿಕರು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತ ಹಾಕಿದರು. ಅಹಿತಕರ ಘಟನೆ, ಗೊಂದಲಗಳಿಲ್ಲದೆ ತಮ್ಮ ಹಕ್ಕು ಚಲಾಯಿಸಿದರು.

ಹನ್ಯಾಳು ಗ್ರಾಮದಲ್ಲಿ ಶಾಸಕ ಎ.ಮಂಜು ಅವರ ಪತ್ನಿ ತಾರಾ ಮಂಜು ಮತದಾನ ಮಾಡಿದರು. ಬಳಿಕ ಮಾತನಾಡಿ, ‘ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಮತದಾರರು ಮತದಾನ ಮಾಡಬೇಕು. ಆಳುವ ಕೇಂದ್ರ ಸರ್ಕಾರವನ್ನು ನಾವೇ ರಚಿಸಿಕೊಳ್ಳುವ ಒಂದು ಅವಕಾಶ ಕಲ್ಪಿಸಿ ಕೊಟ್ಟಿರುವ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಮತದಾರರ ಮನವೊಲಿಕೆ:

ಬಸವಪಟ್ಟಣ ಸಮೀಪದ ಕಾನನಕೊಪ್ಪಲು ಗ್ರಾಮಕ್ಕೆ ಮತದಾನ ಕೇಂದ್ರ ಹಾಕಿಸಿಕೊಡಬೇಕು ಮತ್ತು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು. ಇಲ್ಲವಾದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಚುನಾವಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮದಲ್ಲಿ 380-400 ಮತಗಳಿದ್ದು, ಮತದಾನ ಮಾಡಲು ಬೇರೆ ಗ್ರಾಮಕ್ಕೆ ಹೋಗಬೇಕಿದೆ. ಗ್ರಾಮದಲ್ಲಿ ವೃದ್ಧರು, ವಿಕಲಚೇತನರು, ಹಿರಿಯ ನಾಗರಿಕರಿದ್ದು, ಅವರೆಲ್ಲ ಬಿರು ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ಮತ ಚಲಾಯಿಸಲು ಆಗುವುದಿಲ್ಲ. ಜತೆಗೆ ಗ್ರಾಮ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಚರಂಡಿ ವ್ಯವಸ್ಥೆಯಿಲ್ಲ. ಶಾಲಾ ಕಟ್ಟಡ ಮುರಿದು ಬಿದ್ದಿದ್ದು, ವ್ಯಾಸಂಗಕ್ಕೆ ಬೇರೆ ಗ್ರಾಮಕ್ಕೆ ತೆರಳ ಬೇಕಿದೆ. ಅಂಗನವಾಡಿ ಕೇಂದ್ರ ಇಲ್ಲ. ಹಾಗಾಗಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.

ಅರಕಲಗೂಡು ಮತಗಟ್ಟೆಯೊಂದರಲ್ಲಿ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ